ಕಲ್ಲಿದ್ದಲು ಕೊರತೆ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ನಾಲ್ಕು ಘಟಕಗಳಲ್ಲಿ ಉತ್ಪಾದನೆ ಸ್ಥಗಿತ

photo- pti
ರಾಯಚೂರು, ಎ.26: ರಾಯಚೂರು ಬೃಹತ್ ಶಾಖೋತ್ಪನ್ನ ಘಟಕದ ನಾಲ್ಕು ವಿದ್ಯುತ್ ಘಟಕಗಳು ಸ್ಥಗಿತಗೊಂಡಿದ್ದು, ತಾಲೂಕಿನ ಶಕ್ತಿನಗರದಲ್ಲಿರುವ ವಿದ್ಯುತ್ ಉತ್ಪಾದನಾ ಸ್ಥಾವರ 8 ಘಟಕಗಳ ಪೈಕಿ, ನಾಲ್ಕು ಘಟಕಗಳು ವಿದ್ಯುತ್ ಉತ್ಪಾದನೆ ನಿಲ್ಲಿಸಿವೆ.
1,720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮಥ್ರ್ಯವಿರುವ ಕೇಂದ್ರದಲ್ಲಿ ಸದ್ಯ ನಾಲ್ಕು ಘಟಕಗಳಿಂದ 578 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. 1, 3, 6, 8 ಘಟಕಗಳು ವಿದ್ಯುತ್ ಉತ್ಪಾದನೆ ಮಾಡುತ್ತಿದ್ದರೆ, 2, 4, 5, 7ನೇ ಘಟಕಗಳು ಬಂದ್ ಆಗಿವೆ. ಕಲ್ಲಿದ್ದಲಿನ ಕೊರತೆಯಿಂದ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಆರ್ಟಿಪಿಎಸ್ ಎಕ್ಸಿಕ್ಯೂಟ್ ಡೈರೆಕ್ಟರ್(ಇಡಿ)ಅನ್ನು ದೂರವಾಣಿ ಮೂಲಕ ಸಂಪರ್ಕಿಸಿದರೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಆರ್ಟಿಪಿಎಸ್ನಿಂದ ರಾಜ್ಯದ ವಿದ್ಯುತ್ ಜಾಲಕ್ಕೆ ಅಪಾರ ಪ್ರಮಾಣದಲ್ಲಿ ವಿದ್ಯುತ್ ರವಾನಿಸಲಾಗುತ್ತದೆ. ಆದರೆ, ಬೇಸಿಗೆ ಸಮಯದಲ್ಲಿ ವಿದ್ಯುತ್ ಉತ್ಪಾದನೆ ನಿಲ್ಲಿಸಿರುವುದರಿಂದ ವಿದ್ಯುತ್ ಸಮಸ್ಯೆ ತಲೆದೋರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.





