ತರಕಾರಿ ಮಾರಾಟಗಾರ ಫೈಸಲ್ ಹುಸೇನ್ ಕಸ್ಟಡಿ ಸಾವು ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

ಹೊಸದಿಲ್ಲಿ: 18 ವರ್ಷದ ತರಕಾರಿ ಮಾರಾಟಗಾರನನ್ನು ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಗಳು ಹೊಡೆದು ಕೊಂದ ಹನ್ನೊಂದು ತಿಂಗಳ ನಂತರ, ಪ್ರಕರಣದ ತನಿಖೆಯು ಅನ್ಯಾಯವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಏಪ್ರಿಲ್ 21 ರ ಆದೇಶದಲ್ಲಿ ನ್ಯಾಯಾಲಯವು ಈ ವಿಷಯದ ಬಗ್ಗೆ ಮತ್ತೊಂದು ತನಿಖೆಗೆ ಆದೇಶಿಸಿದೆ ಎಂದು scroll.in ವರದಿ ಮಾಡಿದೆ.
"ನಮ್ಮ ಮುಂದೆ ಇರಿಸಲಾದ ದಾಖಲೆಗಳನ್ನು ಪರಿಶೀಲಿಸಿದ ನಂತರ, ತನಿಖಾಧಿಕಾರಿಯು ತನಿಖೆ ನಡೆಸಿದ ರೀತಿಯನ್ನು ನ್ಯಾಯಯುತ ಮತ್ತು ನಿಷ್ಪಕ್ಷಪಾತ ಎಂದು ಹೇಳಲಾಗುವುದಿಲ್ಲ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ತರಕಾರಿ ಮಾರಾಟಗಾರ ಫೈಸಲ್ ಹುಸೇನ್ ಅವರ ತಾಯಿ ಉನ್ನಾವೋ ಜಿಲ್ಲೆಯ ಬಂಗಾರ್ ಮೌ ಪೊಲೀಸ್ ಠಾಣೆಯ ಅಧಿಕಾರಿಗಳ ವಿರುದ್ಧ ಸಲ್ಲಿಸಿದ ಅರ್ಜಿಯ ಮೇರೆಗೆ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಕಳೆದ ವರ್ಷದ ಮೇ 20 ರಂದು, ಹುಸೇನ್ ಅವರು ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಮಾರುತ್ತಿದ್ದಾಗ ಪೊಲೀಸ್ ಅಧಿಕಾರಿಗಳು ಥಳಿಸಿದ್ದರು. ನಂತರ ಕರೋನವೈರಸ್ ಹರಡುವುದನ್ನು ತಡೆಯಲು ವಿಧಿಸಲಾದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಹುಸೇನ್‌ರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಮತ್ತೆ ಥಳಿಸಲಾಗಿದೆ, ಪೊಲೀಸರ ಥಳಿತಕ್ಕೊಳಗಾಗಿದ್ದ ಹುಸೇನ್ ನಂತರ ಸಾವನ್ನಪ್ಪಿದ್ದರು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಹುಸೇನ್ ಅವರ ಕುಟುಂಬವು ಅವರು ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಪೊಲೀಸರು ಆತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಿರುವುದಾಗಿ ದಿ ಪ್ರಿಂಟ್ ವರದಿ ಮಾಡಿದೆ. ಪೊಲೀಸರ ವಾದವನ್ನು ಕುಟುಂಬ ವಿರೋಧಿಸಿದ ನಂತರ, ಮೇ 21 ರಂದು ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಆಗಸ್ಟ್ 6 ರಂದು, ಪೊಲೀಸರು ಆರಂಭದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ಅಡಿಯಲ್ಲಿ ಕಾನ್‌ಸ್ಟೆಬಲ್ ವಿಜಯ್ ಚೌಧರಿ ಮತ್ತು ಹೋಮ್ ಗಾರ್ಡ್ ಸತ್ಯ ಪ್ರಕಾಶ್ ವಿರುದ್ಧ ಆರೋಪ ಹೊರಿಸಿದ್ದರು. ಆದಾಗ್ಯೂ, ಡಿಸೆಂಬರ್ 2 ರಂದು, ಸ್ಥಳೀಯ ಸೆಷನ್ಸ್ ನ್ಯಾಯಾಲಯದ ಮಧ್ಯಪ್ರವೇಶದ ನಂತರ ಅಧಿಕಾರಿಗಳ ವಿರುದ್ಧ ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.







