ಮಾಲ್ಡೋವಾದಲ್ಲಿ ಸರಣಿ ಸ್ಫೋಟ: ಉಕ್ರೇನ್ ಯುದ್ಧ ವಿಸ್ತರಿಸುವ ಭೀತಿ

ಕೀವ್: ಸೋವಿಯತ್ ಒಕ್ಕೂಟದ ವ್ಯಾಪ್ತಿಯಲ್ಲಿ ಸೇರಿದ್ದ ಮಾಲ್ಡೋವಾದಲ್ಲಿ ಸರಣಿ ಸ್ಫೋಟ ಸಂಭವಿಸಿದ ಬೆನ್ನಲ್ಲೇ, ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿ ಪ್ರದೇಶದಲ್ಲಿ ಅರಾಜಕತೆ ಸೃಷ್ಟಿಸಲು ರಷ್ಯಾ ಯತ್ನಿಸುತ್ತಿದೆ ಎಂದು ಉಕ್ರೇನ್ ಆಪಾದಿಸಿದೆ.
ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ಉಕ್ರೇನ್‍ಗೆ ಪ್ರಬಲ ಶಸ್ತ್ರಾಸ್ತ್ರಗಳ ಪ್ಯಾಕೇಜ್ ನೀಡಲು ಬದ್ಧ ಎಂದು ಘೋಷಿಸಿವೆ. ಜರ್ಮನ್ ವಾಯುನೆಲೆ ರಮ್‍ಸ್ಟೀನ್‍ನಲ್ಲಿ ಸಭೆ ಸೇರಿದ ರಾಷ್ಟ್ರಗಳು ಈ ನಿರ್ಧಾರ ಪ್ರಕಟಿಸಿವೆ. ರಷ್ಯಾ ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಅಣ್ವಸ್ತ್ರ ಯುದ್ಧದ ಅಪಾಯ ಸಾಧ್ಯತೆಯನ್ನು ಪರಿಗಣಿಸದೇ ಪಾಶ್ಚಾತ್ಯ ದೇಶಗಳು ಪರೋಕ್ಷ ಯುದ್ಧನೀತಿ ಅನುಸರಿಸುತ್ತಿವೆ ಎಂದು ಆಪಾದಿಸಿದೆ.
ರಷ್ಯಾದ ಸರ್ಕಾರಿ ಟಿವಿ ಚಾನಲ್‍ನಲ್ಲಿ ವಿದೇಶಾಂಗ ಸಚಿವ ಸೆರ್ಗಿ ಲರ್ವೋವ್ ಅವರನ್ನು ಮೂರನೇ ಜಾಗತಿಕ ಸಮರ ಸಾಧ್ಯತೆ ಬಗ್ಗೆ ಪ್ರಶ್ನಿಸಿ, ಈ ಪರಿಸ್ಥಿತಿ 1962ರ ಕ್ಯೂಬಾ ಕ್ಷಿಪಣಿ ಸಂಷರ್ಘಕ್ಕೆ ಹೋಲಿಸಬಹುದೇ ಎಂದು ಕೇಳಿದಾಗ ಅವರು ಮೇಲಿನಂತೆ ಉತ್ತರಿಸಿದರು. 1962ರಲ್ಲಿ ಬಹುತೇಕ ಅಣ್ವಸ್ತ್ರ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು.
ರಷ್ಯಾ ಹಾಗೂ ಯುದ್ಧಪೀಡಿತ ಉಕ್ರೇನ್‍ನಲ್ಲಿ ತನ್ನ ವಹಿವಾಟನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಪ್ರಮುಖ ಡ್ರೋನ್ ನಿರ್ಮಾಣ ಸಂಸ್ಥೆ ಡಿಜೆಐ ಟೆಕ್ನಾಲಜಿ ಕಂಪನಿ ಲಿಮಿಟೆಡ್ ಪ್ರಕಟಿಸಿದೆ. ಕಳೆದ ಫೆಬ್ರುವರಿಯಲ್ಲಿ ರಷ್ಯಾ ತನ್ನ ನೆರೆ ರಾಷ್ಟ್ರದ ಮೇಲೆ ಆಕ್ರಮಣ ನಡೆಸಿದ ಬಳಿಕ ಚೀನಾ ಕಂಪನಿಯೊಂದು ರಷ್ಯಾದಲ್ಲಿ ವಹಿವಾಟು ಸ್ಥಗಿತಗೊಳಿಸುತ್ತಿರುವುದು ಇದೇ ಮೊದಲು.
ಕೀವ್ ನಗರದ ಕೇಂದ್ರ ಭಾಗದಲ್ಲಿ ರಷ್ಯಾ- ಉಕ್ರೇನ್ ಸ್ನೇಹಸಂಬಂಧದ ಸಂಕೇತವಾಗಿ ನಿರ್ಮಿಸಲಾಗಿದ್ದ ಸೋವಿಯತ್ ಯುಗದ ಪ್ರಮುಖ ಸ್ಮಾರಕವೊಂದನ್ನು ಉಕ್ರೇನ್ ಅಧಿಕಾರಿಗಳು ಮಂಗಳವಾರ ರಷ್ಯಾ ದಾಳಿ ಹಿನ್ನೆಲೆಯಲ್ಲಿ ಧ್ವಂಸಗೊಳಿಸಿದ್ದಾರೆ. 27 ಅಡಿ ಎತ್ತರದ ಈ ಕಂಚಿನ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ. ಸೋವಿಯತ್ ಒಕ್ಕೂಟದ 60ನೇ ವರ್ಷಾಚರಣೆ ಸಂದರ್ಭದಲ್ಲಿ 1982ರಲ್ಲಿ ಇದನ್ನು ಸ್ಥಾಪಿಸಲಾಗಿತ್ತು.







