ಮಧ್ಯಪ್ರದೇಶ: ಕೋಮು ಹಿಂಸಾಚಾರದ ನಂತರ ಮುಸ್ಲಿಮರ ಒಡೆತನದ ಅಂಗಡಿಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದ ವೀಡಿಯೊ ಪತ್ತೆ

Photo: Screenshot/Twitter via Kashif Kakvi
ಭೋಪಾಲ್: ಮಧ್ಯಪ್ರದೇಶದ ಖಾರ್ಗೋನ್ನಲ್ಲಿ ಇತ್ತೀಚೆಗೆ ಕೋಮು ಘರ್ಷಣೆ ನಡೆದ ವಾರಗಳ ನಂತರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಪಟ್ಟಣದಲ್ಲಿ ಮುಸ್ಲಿಮರ ಒಡೆತನದ ಅಂಗಡಿಗಳನ್ನು ಬಹಿಷ್ಕರಿಸಲು ಕರೆ ನೀಡಿರುವುದು ಕಂಡುಬಂದಿದೆ ಎಂದು ಪಿಟಿಐ ಮಂಗಳವಾರ ವರದಿ ಮಾಡಿದೆ.
ಟ್ರಕ್ನಲ್ಲಿ ಅಳವಡಿಸಲಾದ ಧ್ವನಿವರ್ಧಕದಲ್ಲಿ, "ಮುಸ್ಲಿಮರ ಮಾಲಕತ್ವದ ಅಂಗಡಿಗಳಿಂದ ವಸ್ತುಗಳನ್ನು ಖರೀದಿಸಬೇಡಿ" ಎಂದು ಮಹಿಳೆಯರನ್ನು ಒತ್ತಾಯಿಸುತ್ತಿರುವುದು ಕಂಡುಬಂದಿದೆ. ಹೀಗೆ ಕರೆ ನೀಡಿದ ವ್ಯಕ್ತಿ ವೀಡಿಯೊದಲ್ಲಿ ಕಾಣಿಸುತ್ತಿಲ್ಲ.
ಹಿಂಸಾಚಾರದ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ "ನಾಳೆ ತಮ್ಮ ಅಂಗಡಿಗಳನ್ನು ಮುಚ್ಚುವಂತೆ" ಹಿಂದೂಗಳಿಗೆ ಈ ವ್ಯಕ್ತಿ ಒತ್ತಾಯಿಸುತ್ತಿರುವುದು ಕೂಡ ಕೇಳಿಬಂದಿದೆ.
ಎಪ್ರಿಲ್ 19 ರಂದು ಖಾರ್ಗೋನ್ನ ಕತರಗಾಂವ್ ಗ್ರಾಮದಲ್ಲಿ ಈ ಘೋಷಣೆ ಮಾಡಲಾಗಿದೆ ಎಂದು ಕರಾಹಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಪರಮಾನಂದ ಗೋಯಲ್ ಪಿಟಿಐಗೆ ತಿಳಿಸಿದ್ದಾರೆ. ಈ ಗ್ರಾಮವು ಖಾರ್ಗೋನ್ ಪಟ್ಟಣದಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿದೆ.
ರಾಮನವಮಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದವರಿಗೆ ತಕ್ಕ ಉತ್ತರ ನೀಡಿ ಎಂದು ಆ ವ್ಯಕ್ತಿ ಹಿಂದೂಗಳನ್ನು ಕೇಳಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಎಪ್ರಿಲ್ 10 ರಂದು ಕೆಲವು ಸ್ಥಳೀಯರು ಖಾರ್ಗೋನ್ನ ತಾಲಾಬ್ ಚೌಕ್ ಪ್ರದೇಶದಲ್ಲಿ ಜೋರಾಗಿ ಹಾಗೂ ಪ್ರಚೋದನಕಾರಿ ಸಂಗೀತವನ್ನು ನುಡಿಸುವುದನ್ನು ವಿರೋಧಿಸಿ ರಾಮನವಮಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ ಬಳಿಕ ಖಾರ್ಗೋನ್ನಲ್ಲಿ ಕೋಮು ಹಿಂಸಾಚಾರವು ಆರಂಭವಾಗಿತ್ತು. ತರುವಾಯ, ಗೌಶಾಲಾ ಮಾರ್ಗ, ತಬಾಡಿ ಚೌಕ್, ಸಂಜಯ್ ನಗರ ಹಾಗೂ ಮೋತಿಪುರ ಪ್ರದೇಶಗಳಲ್ಲಿ ಘರ್ಷಣೆಗಳು ಆರಂಭವಾದವು.
ಹಿಂಸಾಚಾರದಲ್ಲಿ ಕನಿಷ್ಠ 24 ಜನರು ಗಾಯಗೊಂಡಿದ್ದಾರೆ. ಘರ್ಷಣೆಯಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಿಗೂ ಬೆಂಕಿ ಹಚ್ಚಲಾಗಿದೆ.
ಎಪ್ರಿಲ್ 11 ರಂದು ಮಧ್ಯಪ್ರದೇಶ ಸರಕಾರವು ಖಾರ್ಗೋನ್ನಲ್ಲಿ ಮುಸ್ಲಿಮರ ಮನೆಗಳು ಹಾಗೂ ಅಂಗಡಿಗಳನ್ನು ನೆಲಸಮಗೊಳಿಸಿತು. ಕೆಡವಲಾದ ಮನೆಗಳು ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದವರಿಗೆ ಸೇರಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದರು.
#KhargoneRiots
— काश/if Kakvi (@KashifKakvi) April 25, 2022
Open call to boycott Muslims even 15 days after the incident. Such announcements and provocation continue unabated in nearby villages, small towns of Khargone and Barwani districts.
The inaction of police raising many questions. @newsclickin @MPArunYadav @DGP_MP pic.twitter.com/NQwJ9qiK0S







