ಕೇಂದ್ರವು ಅಬಕಾರಿ ಸುಂಕ ಕಡಿತಗೊಳಿಸಿದ್ದರೂ ಕೆಲವು ರಾಜ್ಯಗಳು ಸ್ಥಳೀಯ ತೆರಿಗೆಗಳನ್ನು ತಗ್ಗಿಸಿಲ್ಲ: ಪ್ರಧಾನಿ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ

ಹೊಸದಿಲ್ಲಿ,ಎ.27: ಪ್ರತಿಪಕ್ಷ ಆಡಳಿತದ ರಾಜ್ಯಗಳ ವಿರುದ್ಧ ಬುಧವಾರ ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು, ಕೇಂದ್ರವು ಕಳೆದ ವರ್ಷದ ನವಂಬರ್ನ ಲ್ಲಿ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದರೂ ಕೆಲವು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಿರಲಿಲ್ಲ ಮತ್ತು ಕೇಂದ್ರದ ಕ್ರಮಗಳ ಲಾಭಗಳನ್ನು ಜನರಿಗೆ ವರ್ಗಾಯಿಸದೆ ಅವರಿಗೆ ಅನ್ಯಾಯವನ್ನು ಮಾಡಿದ್ದವು ಎಂದು ಹೇಳಿದರು.
ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ದೇಶದಲ್ಲಿಯ ಕೋವಿಡ್ ಸ್ಥಿತಿಯ ಕುರಿತು ಮುಖ್ಯಮಂತ್ರಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ,ಜಾಗತಿಕ ಸ್ಥಿತಿಯಿಂದಾಗಿ ಜನರು ಎದುರಿಸುತ್ತಿರುವ ಸವಾಲುಗಳನ್ನು ಪ್ರತ್ಯೇಕವಾಗಿ ಚರ್ಚಿಸಲು ತಾನು ಬಯಸಿದ್ದೇನೆ. ಈಗ ಉದ್ಭವಿಸಿರುವ ಯುದ್ಧದ ಸ್ಥಿತಿಯು ಪೂರೈಕೆ ಸರಪಳಿಯ ಮೇಲೆ ಪ್ರತಿಕೂಲ ಪರಿಣಾವನ್ನುಂಟು ಮಾಡಿದೆ ಮತ್ತು ಇಂತಹ ಸ್ಥಿತಿಯಲ್ಲಿ ಸವಾಲುಗಳು ದಿನೇ ದಿನೇ ಹೆಚ್ಚುತ್ತಿವೆ ಎಂದು ರಶ್ಯ-ಉಕ್ರೇನ್ ನಡುವಿನ ಸಂಘರ್ಷವನ್ನು ಪ್ರಸ್ತಾವಿಸಿ ಹೇಳಿದರು.
ಜಾಗತಿಕ ಬಿಕ್ಕಟ್ಟು ಹಲವಾರು ಸವಾಲುಗಳನ್ನು ಒಡ್ಡುತ್ತಿದೆ. ಇಂತಹ ಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಹಕಾರಿ ಒಕ್ಕೂಟವಾದದ ಆಶಯವನ್ನು ಮತ್ತು ಸಮನ್ವಯವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದರು.
ಪೆಟ್ರೋಲ್ ಮತ್ತು ಡೀಸೆಲ್ಗಳ ಅಧಿಕ ಬೆಲೆಗಳನ್ನು ಪ್ರಸ್ತಾವಿಸಿದ ಮೋದಿ,ಕಳೆದ ವರ್ಷದ ನವಂಬರ್ನಲ್ಲಿ ಜನರ ಮೇಲಿನ ಹೊರೆಯನ್ನು ತಗ್ಗಿಸಲು ಈ ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದ ಕೇಂದ್ರವು,ಸ್ಥಳೀಯ ತೆರಿಗೆಗಳನ್ನು ಇಳಿಸುವಂತೆ ಮತ್ತು ಜನರಿಗೆ ಲಾಭಗಳನ್ನು ವರ್ಗಾಯಿಸುವಂತೆ ರಾಜ್ಯಗಳನ್ನು ಆಗ್ರಹಿಸಿತ್ತು. ಕೆಲವು ರಾಜ್ಯಗಳು ತೆರಿಗೆಗಳನ್ನು ಇಳಿಸಿದ್ದವು,ಆದರೆ ಕೆಲವು ರಾಜ್ಯಗಳು ಜನರಿಗೆ ಯಾವುದೇ ಲಾಭವನ್ನು ನೀಡಿರಲಿಲ್ಲ. ಇದರಿಂದಾಗಿ ಈ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಅಧಿಕ ಮಟ್ಟದಲ್ಲಿಯೇ ಮುಂದುವರಿದಿವೆ. ಒಂದು ರೀತಿಯಲ್ಲಿ ಇದು ಜನರಿಗೆ ಮಾಡಿರುವ ಅನ್ಯಾಯ ಮಾತ್ರವಲ್ಲ,ಇದು ನೆರೆಯ ರಾಜ್ಯಗಳ ಮೇಲೂ ಪರಿಣಾಮವನ್ನು ಬೀರುತ್ತಿದೆ ಎಂದರು.
ಮಹಾರಾಷ್ಟ್ರ,ಪ.ಬಂಗಾಳ,ತೆಲಂಗಾಣ,ಆಂಧ್ರಪ್ರದೇಶ,ಕೇರಳ, ಜಾರ್ಖಂಡ್ ಮತ್ತು ತಮಿಳುನಾಡಿನಂತಹ ಕೆಲವು ರಾಜ್ಯಗಳು ಒಂದಲ್ಲ ಒಂದು ಕಾರಣದಿಂದ ಕೇಂದ್ರದ ಮನವಿಗೆ ಕಿವಿಗೊಟ್ಟಿರಲಿಲ್ಲ ಮತ್ತು ಈ ರಾಜ್ಯಗಳ ಜನರ ಮೇಲಿನ ಹೊರೆ ಮುಂದುವರಿದಿದೆ ಎಂದ ಮೋದಿ, ಈಗಲಾದರೂ ವ್ಯಾಟ್ ಅನ್ನು ಇಳಿಸಿ ಜನರ ಮೇಲಿನ ಹೊರೆಯನ್ನು ತಗ್ಗಿಸಿ ಎಂದು ತಾನು ಈ ರಾಜ್ಯಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ಮೋದಿ ದಾಳಿಗೆ ಕಾಂಗ್ರೆಸ್ ತಿರುಗೇಟು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ನ್ನು ತಗ್ಗಿಸುವಂತೆ ರಾಜ್ಯಗಳಿಗೆ ಮನವಿ ಮಾಡಿಕೊಂಡಿರುವ ಮೋದಿಯವರನ್ನು ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ.
ಕಳೆದ ವರ್ಷ ಪೆಟ್ರೋಲ್ ಮತ್ತು ಡೀಸೆಲ್ಗಳ ಬೆಲೆಗಳನ್ನು ನಿರಂತರವಾಗಿ ಹೆಚ್ಚಿಸುವ ಮೂಲಕ ಕೇಂದ್ರವು 26 ಲ.ಕೋ.ರೂ.ಗಳನ್ನು ಗಳಿಸಿದೆ. ಇದನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿದೆಯೇ? ನೀವು (ಮೋದಿ) ಸಕಾಲದಲ್ಲಿ ರಾಜ್ಯಗಳ ಜಿಎಸ್ಟಿ ಪಾಲನ್ನು ಪಾವತಿಸಿಲ್ಲ ಮತ್ತು ವ್ಯಾಟ್ ತಗ್ಗಿಸುವಂತೆ ಹೇಳುತ್ತಿದ್ದೀರಿ ಎಂದು ಹೇಳಿದ ಕಾಂಗ್ರೆಸ್ ನಾಯಕ ಪವನ ಖೇರಾ,ಮೋದಿ ಮೊದಲು ಅಬಕಾರಿ ಸುಂಕವನ್ನು ಇನ್ನಷ್ಟು ಕಡಿತಗೊಳಿಸಲಿ ಮತ್ತು ನಂತರ ವ್ಯಾಟ್ ಕಡಿಮೆ ಮಾಡುವಂತೆ ಇತರರಿಗೆ ಹೇಳಲಿ ಎಂದು ಆಗ್ರಹಿಸಿದರು.
ಇಂಧನ ಬೆಲೆ ಏರಿಕೆ ಕುರಿತು ತನ್ನ ಕರ್ತವ್ಯದಿಂದ ಕೇಂದ್ರವು ನುಣುಚಿಕೊಳ್ಳುತ್ತಿದೆ ಎಂದು ಹೇಳಿದ ಕಾಂಗ್ರೆಸ್ ನಾಯಕ ದೀಪೇಂದರ್ ಎಸ್.ಹೂಡಾ ಅವರು,ಬಿಜೆಪಿ ಅಧಿಕಾರದಲ್ಲಿರುವ ಹರ್ಯಾಣಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅತ್ಯಂತ ಹೆಚ್ಚಿನ ವ್ಯಾಟ್ ಹೇರಲಾಗಿದೆ. ಜಾಗತಿಕ ತೈಲ ಬೆಲೆಗಳು ಹೆಚ್ಚಿದಾಗ ಇಂಧನ ಬೆಲೆಗಳನ್ನು ಹೆಚ್ಚಿಸಲಾಗುತ್ತದೆ,ಆದರೆ ಜಾಗತಿಕವಾಗಿ ಗೋದಿಯ ಬೆಲೆಗಳಲ್ಲಿ ಏರಿಕೆಯಾದಾಗ ರೈತರು ಗೋದಿಗೆ ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯನ್ನು ಪಡೆಯುವುದಿಲ್ಲ ಎಂದರು.