2 ಬಿಲಿಯನ್ ಡಾಲರ್ ಯೋಜನೆಗೆ ಸಹಿ ಹಾಕಿದ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಅಬು ಧಾಬಿಯ ತಝೀಝ್ ಕಂಪೆನಿ

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಅಬು ಧಾಬಿ ಕೆಮಿಕಲ್ಸ್ ಡಿರೈವೇಟಿವಸ್ ಕಂಪನಿ ಆರ್‌ಎಸ್‌ಸಿ ((TA’ZIZ) ಅಬು ಧಾಬಿಯ ರುವೈಸ್ ಎಂಬಲ್ಲಿ ಎಥಿಲೀನ್ ಡೈಕ್ಲೋರೈಡ್ (ಇಡಿಸಿ) ಮತ್ತು ಪೋಲಿವಿನೈಲ್ ಕ್ಲೋರೈಡ್ (ಪಿವಿಸಿ) ಯೋಜನೆಯ ಅಭಿವೃದ್ಧಿಗಾಗಿ ಜಂಟಿ ಷೇರುದಾರರ ನಡುವಿನ ಒಪ್ಪಂದಕ್ಕೆ ಬಂದಿವೆ. ಸರಕಾರಿ ಒಡೆತನದ ಅಭು ದಾಬಿ ನ್ಯಾಷನಲ್ ಆಯಿಲ್ ಕಂಪೆನಿ ಮತ್ತು ಹೂಡಿಕೆ ಸಂಸ್ಥೆ ಎಡಿಕ್ಯೂ ಇವುಗಳು TA’ZIZ ನಲ್ಲಿ ಪಾಲು ಬಂಡವಾಳ ಹೊಂದಿವೆ.
ಒಟ್ಟು 2 ಬಿಲಿಯನ್ ಡಾಲರ್‌ಗೂ ಅಧಿಕ ಹೂಡಿಕೆಯ ಕ್ಲೋರ್-ಆಲ್ಕಲಿ, ಎಥಿಲೀನ್ ಡೈಕ್ಲೋರೈಡ್ ಮತ್ತು ಪಾಲಿವಿನೈಲ್ ಕ್ಲೋರೈಡ್ ಉತ್ಪಾದನಾ ಘಟಕವನ್ನು ಈ ಜಂಟಿ ಪಾಲುದಾರಿಕೆಯನ್ವಯ ನಿರ್ಮಿಸಿ ನಿರ್ವಹಿಸಲಾಗುವುದು.
ಕ್ಲೋರ್-ಆಲ್ಕಲಿ ಅನ್ನು ಅಲುಮಿನಾ ಸಂಸ್ಕರಣೆಗೆ ಬಳಕೆಯಾಗುವ ಕಾಸ್ಟಿಕ್ ಸೋಡಾ ಬಳಕೆಗೆ ಬಳಸಲಾಗುವುದಾದರೆ, ಇಡಿಸಿ ಅನ್ನು ಗ್ರಾಹಕ ಉತ್ಪನ್ನಗಳಿಗೆ ಬಳಕೆಯಾಗುವ ಪಿವಿಸಿ ಉತ್ಪಾದಿಸಲು ಬಳಸಲಾಗುತ್ತದೆ. ಈ ಉತ್ಪನ್ನಗಳಲ್ಲಿ ಪೈಪ್‌ಗಳು, ಕಿಟಿಕಿ ಫಿಟ್ಟಿಂಗ್‌ಗಳು, ಕೇಬಲ್‌ಗಳು, ಫಿಲ್ಮ್ ಮತ್ತು ಫ್ಲೋರಿಂಗ್ ಸೇರಿವೆ.
ರುವೈಸ್ ಇಲ್ಲಿರುವ (TA’ZIZ) ಕೈಗಾರಿಕಾ ರಾಸಾಯನಿಕಗಳ ವಲಯದಲ್ಲಿ ರಾಸಾಯನಿಕ ಯೋಜನೆಯೊಂದರ ಅಭಿವೃದ್ಧಿಗೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಅಬು ಧಾಬಿ ನ್ಯಾಷನಲ್ ಆಯಿಲ್ ಕಂಪೆನಿ ಜತೆ ಒಪ್ಪಂದಕ್ಕೆ ಬಂದಿತ್ತು.