ಕೋವಿಡ್ ನಾಲ್ಕನೆ ಅಲೆ ಬಂದರೂ ನಿಗದಿಯಂತೆ ಶಾಲೆ ಪ್ರಾರಂಭ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್

ಮಂಗಳೂರು : ಕೋವಿಡ್ ನಾಲ್ಕನೆ ಅಲೆ ಬಂದರೂ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ನಿಗದಿಯಂತೆ ಆರಂಭವಾಗಿ ತರಗತಿಗಳು ನಡೆಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರನೇ ಅಲೆ ಇರುವಾಗಲೇ ಶಾಲೆಗಳನ್ನು ನಡೆಸಲಾಗಿದೆ. ಈ ಬಾರಿಯೂ ಈಗಾಗಲೇ ನಿಗದಿಯಾಗಿರುವಂತೆ ಶಾಲಾ ಪಠ್ಯಕ್ರಮಗಳು ಆರಂಭವಾಗಲಿದೆ ಎಂದರು.
ಕೋವಿಡ್‌ನಿಂದಾಗಿ ಒಂದೂವರೆ ವರ್ಷದಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಕಡಿಮೆಯಾಗಿರುವ ಕಾರಣ, 15 ದಿನ ಮುಂಚಿತವಾಗಿ ಶಾಲೆ ಪ್ರಾರಂಭಿಸಿ, ಕಲಿಕಾ ಚೇತರಿಕೆ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು. ತಜ್ಞರ ಪ್ರಕಾರ ಜುಲೈ ವೇಳೆಗೆ ನಾಲ್ಕನೇ ಅಲೆ ಬರುವ ಸಾಧ್ಯತೆ ಇದ್ದು, ಆ ಸಂದರ್ಭದಲ್ಲಿ ಪರಿಸ್ಥಿತಿ ಅವಲೋಕಿಸಿ, ಶಿಕ್ಷಣ ಇಲಾಖೆ ನಿರ್ಣಯ ಕೈಗೊಳ್ಳಲಿದೆ ಎಂದರು.
ಬೆಂಗಳೂರಿನ ಶಾಲೆಯೊಂದರಲ್ಲಿ ಬೈಬಲ್ ಓದು ಕಡ್ಡಾಯಗೊಳಿಸಿರುವ ದೂರು ಬಂದ ಹಿನ್ನೆಲೆಯಲ್ಲಿ ಅಲ್ಲಿನ ಬಿಇಒಗೆ ಇದನ್ನು ಪರಿಶೀಲಿಸಲು ಸೂಚಿಸಲಾಗಿದೆಯೇ ವಿನಾ ಶಾಲೆಯ ಆಡಳಿತಾತ್ಮಕ ವಿಷಯದಲ್ಲಿ ಶಿಕ್ಷಣ ಇಲಾಖೆ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸಚಿವರು ಹೇಳಿದರು.
ಕರ್ನಾಟಕ ಪಠ್ಯಕ್ರಮದ ನಲಿಕಲಿ ಮತ್ತು ಚಿಲಿಪಿಲಿ ಕಾರ್ಯಕ್ರಮಗಳು ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಆಶಯಕ್ಕೆ ತಕ್ಕಂತೆ ಇವೆ. ಆದ್ದರಿಂದ 1 ಮತ್ತು 2ನೇ ತರಗತಿಗೆ ಈ ವರ್ಷದಿಂದ ರಾಜ್ಯದ 20 ಸಾವಿರ ಶಾಲೆಗಳಲ್ಲಿ ಎನ್‌ಇಪಿ ಜಾರಿಗೊಳಿಸಲಾಗುವುದು ಎಂದವರು ಹೇಳಿದರು.
"ಕರ್ನಾಟಕ ಶಿಕ್ಷಣ ಕಾಯ್ದೆ ಅಡಿಯಲ್ಲಿ ನೋಂದಣಿಯಾದ ಶಾಲೆಗಳು ಕಾಯ್ದೆಯಲ್ಲಿರುವ ನಿಯಮ ಅನುಸರಿಸ ಬೇಕು. ಈ ಕಾಯ್ದೆ ಅನ್ವಯ ಯಾವುದೇ ಧಾರ್ಮಿಕ ಪುಸ್ತಕ ಅಥವಾ ಧಾರ್ಮಿಕ ಆಚರಣೆಯನ್ನು ಶಿಕ್ಷಣ ವ್ಯವಸ್ಥೆಯಲ್ಲಿ ತರಲು ಅವಕಾಶವಿಲ್ಲ. ಬೈಬಲ್ ಮತ್ತು ಕುರಾನ್‌ಗಳು ಧಾರ್ಮಿಕ ಪುಸ್ತಕಗಳು. ಭಗವದ್ಗೀತೆ ಧಾರ್ಮಿಕ ಪುಸ್ತಕ ಅಲ್ಲ. ಅದು ಜೀವನಕ್ಕೆ ಬೇಕಾದ ಮೌಲ್ಯಗಳನ್ನು ತಿಳಿಸುತ್ತದೆ".
-ಬಿ.ಸಿ. ನಾಗೇಶ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು