ಯುನಿವೆಫ್ ಕರ್ನಾಟಕ ವತಿಯಿಂದ ಇಫ್ತಾರ್ ಸ್ನೇಹ ಮಿಲನ

ಮಂಗಳೂರು : ಯುನಿವೆಫ್ ಕರ್ನಾಟಕ ಇದರ ವತಿಯಿಂದ ಸರ್ವಧರ್ಮೀಯ ಇಫ್ತಾರ್ ಸ್ನೇಹ ಮಿಲನ ಕಾರ್ಯಕ್ರಮವು ನಗರದ ಕಂಕನಾಡಿ ಬಳಿಯ ಜಮೀಯತುಲ್ ಫಲಾಹ್ ಹಾಲ್‌ನಲ್ಲಿ ಜರುಗಿತು.
ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನ್ಯಾಯವಾದಿ ಭಾರತಿ ಪುಷ್ಪರಂಜನ್ ಭಾರತದಲ್ಲಿ ಪ್ರತಿಯೊಬ್ಬರಿಗೂ ಅವರದೇ ಶೈಲಿಯಲ್ಲಿ ಬದುಕುವ ಅವಕಾಶವಿದೆ. ಇದು ನಮ್ಮ ದೇಶದ ಸಂವಿಧಾನ ನೀಡಿರುವ ಅಮೂಲ್ಯ ಕೊಡುಗೆಯಾಗಿದೆ. ಇದನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಪರಿಸ್ಥಿತಿ ಚಿಂತನಾರ್ಹವಾಗಿದೆ ಎಂದು ಹೇಳಿದರು.
ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಮಾತನಾಡಿ ಅನ್ಯಾಯವಾದಾಗ ಜಾತಿ ಧರ್ಮಗಳನ್ನು ನೋಡದೆ ಪ್ರತಿಯೊಬ್ಬರು ಖಂಡಿಸಬೇಕು ಮತ್ತು ವಿರೋಧಿಸಬೇಕಾಗಿದೆ. ಹಿಂದೆ ನಮ್ಮಲ್ಲೆರ ಬದುಕು ಬಹಳ ಅನ್ಯೋನ್ಯವಾಗಿತ್ತು. ಆದರೆ ಈಗ ಜಾತಿ, ಧರ್ಮಗಳ ಧ್ರುವೀಕರಣದಿಂದಾಗಿ ಪರಿಸ್ಥಿತಿಯು ಶೋಚನೀಯವಾಗಿದೆ. ಹಳೆಯ ಭ್ರಾತೃತ್ವವನ್ಮು ಮರಳಿ ಸ್ಥಾಪಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಈಗೀಗ ಎಲ್ಲ ವಿಚಾರಗಳಿಗೂ ಧರ್ಮಲೇಪದ ಕೆಲಸ ನಡೆಯುತ್ತಿರುವುದು ಖಂಡನೀಯವಾಗಿದೆ. ಇಸ್ಲಾಮಿನ ಕೆಲವು ಸಾಂಕೇತಿಕ ಪದಗಳನ್ನು ದುರ್ವ್ಯಾಖ್ಯಾನ ಮಾಡಿ ಸಮಾಜವನ್ನು ಧ್ರುವೀಕರಿಸುವ ಕೆಲಸ ನಡೆಯುತ್ತಿದೆ ಇದನ್ನು ಪ್ರತಿಯೊಬ್ಬರೂ ವಿರೋಧಿಸಬೇಕು ಮತ್ತು ವಾಸ್ತವ ಅಂಶವನ್ನು ತಿಳಿಯಬೇಕು. ಆಗ ಮಾತ್ರ ಸಾಮರಸ್ಯದ ಸಮಾಜ ನಿರ್ಮಾಣವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಯುನಿವೆಫ್ ಕರ್ನಾಟಕ ಮಂಗಳೂರು ಘಟಕದ ಕಾರ್ಯದರ್ಶಿ ಅರೀಝ್ ಕುರ್‌ಆನ್ ವಾಚಿಸಿದರು. ಯುನಿವೆಫ್ ಕರ್ನಾಟಕದ ಕಾರ್ಯದರ್ಶಿ ಮುಹಮ್ಮದ್ ಸೈಫುದ್ದೀನ್ ಕಾರ್ಯಕ್ರಮ ನಿರೂಪಿಸಿದರು.