ಬೈಂದೂರು: ಬಿಂದುಶ್ರೀ ಪ್ರಶಸ್ತಿಗೆ ಡಾ.ಮೋಹನ್ ಆಳ್ವ ಆಯ್ಕೆ

ಬೈಂದೂರು : ಸುರಭಿ ಜೈಸಿರಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡಲಾಗುವ ಬಿಂದುಶ್ರೀ ಪ್ರಶಸ್ತಿಗೆ ಸಾಂಸ್ಕೃತಿಕ ಚಿಂತಕ, ಶಿಕ್ಷಣಕ್ರಾಂತಿಯ ಹರಿಕಾರ ಡಾ.ಎಂ.ಮೋಹನ ಆಳ್ವ ಆಯ್ಕೆಯಾಗಿದ್ದಾರೆ.
ಮೇ 9ರಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂ. ನಗದು, ಚಿನ್ನದ ಪದಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಬುಧವಾರ ಬೈಂದೂರಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಸುರಭಿ ಸಂಸ್ಥೆಯ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ ಎಸ್. ಜನಾರ್ದನ ಮರವಂತೆ ಮಾಹಿತಿ ನೀಡಿದರು.
ಸುರಭಿ ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಮಾತನಾಡಿ ಇಪ್ಪತ್ತೆರಡನೇ ವರ್ಷದ ಸಂಭ್ರಮದಲ್ಲಿರುವ ಬೈಂದೂರಿನ ಕಲಾ ಸಂಸ್ಥೆ ಸುರಭಿ ಆಶ್ರಯದಲ್ಲಿ ಮೇ ೭ರಿಂದ ನಾಲ್ಕು ದಿನಗಳ ಕಾಲ ಸುರಭಿ ಜೈಸಿರಿ ಕಾರ್ಯಕ್ರಮ ಹಾಗೂ ಎಂಟನೇ ವರ್ಷದ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಸಂಜೆ ೬ಕ್ಕೆ ಶಾರದಾ ವೇದಿಕೆಯಲ್ಲಿ ಜರುಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸುರಭಿ ನಿರ್ದೇಶಕ ಸುಧಾಕರ ಪಿ. ಬೈಂದೂರು, ಖಜಾಂಚಿ ಸುರೇಶ್ ಹುದಾರ್ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಮಿಜಾರುಗುತ್ತು ಮನೆತನದ ಡಾ.ಎಂ.ಮೋಹನ ಆಳ್ವ (70) ಬಹುಮುಖ ಪ್ರತಿಭೆಯ ವ್ಯಕ್ತಿ. ವೃತ್ತಿಯಲ್ಲಿ ವೈದ್ಯರಾದರೂ ಕ್ರೀಡೆ, ಜಾನಪದ, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡು ಸಾಕಷ್ಟು ದಾಖಲೆ ನಿರ್ಮಿಸಿದ ಖ್ಯಾತಿ ಅವರದ್ದು. ಕಲೆ ಸಂಸ್ಕೃತಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಸಿದ ಅವರು ಭಾರತೀಯ ಕಲೆ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.







