ವಿದ್ಯುತ್ ಪ್ರವಹಿಸಿ ಯುವಕನ ಸಾವು ಪ್ರಕರಣ: ಇಂಧನ ಇಲಾಖೆಯ ಮಾರ್ಗಸೂಚಿಯಂತೆ ಪರಿಹಾರ; ಸಿಎಂ ಬೊಮ್ಮಾಯಿ

ಬೆಂಗಳೂರು, ಎ.27: ಬೆಂಗಳೂರಿನಲ್ಲಿ 22 ವರ್ಷದ ಯುವಕ ವಿದ್ಯುತ್ ಪ್ರವಹಿಸಿ ಸಾವು ಸಂಭವಿಸಿದ್ದು, ಇಂಧನ ಇಲಾಖೆಯ ಮಾರ್ಗಸೂಚಿಯಂತೆ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಡೆಸಿದ ವಿಡಿಯೋ ಸಂವಾದದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ವಿದ್ಯುತ್ ಪ್ರವಹಿಸಿ ಯುವಕನ ಸಾವು ಪ್ರಕರಣಕ್ಕೆ ಬಿಬಿಎಂಪಿ ಹಾಗೂ ಬೆಸ್ಕಾಂ ಬೇಜವಾಬ್ದಾರಿತನವೇ ಕಾರಣ ಎಂದು ಆರೋಪಿಸಲಾಗುತ್ತಿದೆ ಎಂಬುದಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇಂತಹ ಪ್ರಕರಣಗಳನ್ನು ಸಹಿಸಲಾಗುವುದಿಲ್ಲ. ಈ ಅವಘಡ ಆಪ್ಟಿಕಲ್ ವೈರ್ ಅಥವಾ ವಿದ್ಯುತ್ ತಂತಿಯಿಂದ ಸಂಭವಿಸಿರುವುದೇ ಎಂಬ ಬಗ್ಗೆ ತನಿಖೆ ನಡೆಸಲು ಸೂಚನೆ ನೀಡಲಾಗಿದೆ ಎಂದರು.
Next Story





