ಗೂಡ್ಸ್ ಶೆಡ್ ರೈಲ್ವೆ ಕೂಲಿ ಕಾರ್ಮಿಕರಿಗೆ ಸಿಗದ ಮೂಲಸೌಕರ್ಯ; ಕೆಲಸ ಸ್ಥಗಿತದ ಎಚ್ಚರಿಕೆ ನೀಡಿದ ಇಂಟಕ್
ಮಂಗಳೂರು : ಉರಿ ಬಿಸಿಲಿನಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುವ ಕಾರ್ಮಿಕರಿಗೆ ಮೂಲಭೂತ ಸೌಕರ್ಯ ನೀಡುತ್ತಿಲ್ಲ. ರೈಲ್ವೆ ಇಲಾಖೆ ತಕ್ಷಣ ಮೂಲಸೌಕರ್ಯ ಒದಗಿಸಬೇಕು. ಇಲ್ಲದಿದ್ದಲ್ಲಿ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಬೇಕಾದೀತು ಎಂದು ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿ ಎಚ್ಚರಿಕೆ ನೀಡಿದ್ದಾರೆ.
ನಗರದ ಗೂಡ್ಸ್‌ಶೆಡ್‌ಗೆ ಕಾರ್ಮಿಕರ ಮನವಿ ಮೇರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿಮೆಂಟ್, ಆಹಾರ ಸಾಮಗ್ರಿ ಸಹಿತ ಹಲವು ಸರಕುಗಳು ದಿನನಿತ್ಯ ಬರುತ್ತಿದೆ. ಅವುಗಳನ್ನು ಅತ್ತಿಂದಿತ್ತ ನೂರಾರು ಕಾರ್ಮಿಕರು ಸಾಗಿಸುತ್ತಿದ್ದಾರೆ. ಆದರೆ ಈ ಕಾರ್ಮಿಕರಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ. ವಿಶ್ರಾಂತಿ ಕೊಠಡಿ, ಸ್ನಾನ ಗೃಹ ಇಲ್ಲದೆ ಪರದಾಡುತ್ತಿದ್ದಾರೆ. ಪಾಲಿಕೆಯಿಂದ ನೀರಿನ ಸಂಪರ್ಕವೂ ಇಲ್ಲ. ಇರುವ ಬಾವಿಯ ನೀರು ಕಶ್ಮಲದಿಂದ ಕೂಡಿದೆ. ಕಳೆದ ಮೂವತ್ತು ವರ್ಷಗಳಿಂದ ಈ ಕಾರ್ಮಿಕರಿಗೆ ಸೌಲಭ್ಯ ನೀಡದೆ ರೈಲ್ವೆ ಇಲಾಖೆಯು ನಿಕೃಷ್ಠವಾಗಿ ಕಂಡಿದೆ. ಇದೀಗ ಇಂಟಕ್ ಸಂಘಟನೆಯ ಬಲಿಷ್ಠವಾಗಿದ್ದು ಕಾರ್ಮಿಕರ ಧ್ವನಿಯಾಗಿದೆ. ಇನ್ನು ಶೋಷಣೆ ಮಾಡಿದರೆ ಮುಷ್ಕರ ನಡೆಸುತ್ತೇವೆ ಎಂದರು.
ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ಮಾತನಾಡಿ ಇದೀಗ ಗೂಡ್ಸ್ ಲೈನ್ ವಿದ್ಯುದ್ದೀಕರಣವಾಗಿದ್ದು ತಂತಿಗಳು ಹಾದು ಹೋಗಿವೆ. ಕಾರ್ಮಿಕರಿಗೆ ಸುರಕ್ಷತೆಯ ಭೀತಿ ಎದುರಾಗಿದೆ. ಸಿಮೆಂಟ್ ಚೀಲವನ್ನು ಹೊತ್ತು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಇಷ್ಟೆಲ್ಲಾ ಆತಂಕದ ನಡುವೆ ಕೆಲಸ ಮಾಡುವಾಗ ಕನಿಷ್ಠ ನೀರು, ಶೌಚಾಲಯ, ವಿಶ್ರಾಂತಿ ವ್ಯವಸ್ಥೆ ಮಾಡಲು ಅತೀ ದೊಡ್ಡ ಜಾಲ ಹೊಂದಿರುವ ರೈಲ್ವೆ ಇಲಾಖೆ ಕೆಲವು ಲಕ್ಷ ಖರ್ಚು ಮಾಡಲು ಹಿಂದೇಟು ಹಾಕುವುದು ವಿಪರ್ಯಾಸ. ಅಧಿಕಾರಿಗಳು ಕಾರ್ಮಿಕರ ಬಗೆಗಿರುವ ನಿರ್ಲಕ್ಷ್ಯ ಧೋರಣೆ ಕೈಬಿಡಬೇಕು. ಒಂದು ತಿಂಗಳ ಒಳಗಾಗಿ ಸೌಕರ್ಯ ಒದಗಿಸಲು ವಿಫಲವಾದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಮಾಡುವುದಾಗಿ ತಿಳಿಸಿದರು.
ಬಳಿಕ ಸೆಂಟ್ರಲ್ ರೈಲ್ವೆ ಕಚೇರಿಯ ನಿಲ್ದಾಣಾಧಿಕಾರಿ ಪ್ರಶಾಂತ್ ರಂಜನ್ ಸಿನ್ಹಾರಿಗೆ ಬೇಡಿಕೆಯುಳ್ಳ ಮನವಿ ಪತ್ರ ನೀಡಲಾಯಿತು. ಈ ಸಂದರ್ಭ ಮೂಲಸೌಕರ್ಯ ಒದಗಿಸಿದ್ದೇವೆ ಎಂದು ಪ್ರತಿಕ್ರಿಯಿಸಿದ ಅಧಿಕಾರಿಯನ್ನು ಇಂಟಕ್ ಮುಖಂಡರು ತರಾಟೆಗೆ ತೆಗೆದುಕೊಂಡಲ್ಲದೆ, ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲು ಒತ್ತಾಯಿಸಿದರು.
ಕೆನರಾ ಗೂಡ್ಸ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಸುರೇಶ್ ಪಿ.ಕೆ. ಕಾರ್ಮಿಕರು ಪಡುತ್ತಿರುವ ಬವಣೆಯನ್ನು ವಿವರಿಸಿದರು. ಇಂಟಕ್ ಮುಖಂಡರಾದ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಪುನೀತ್‌ಶೆಟ್ಟಿ, ಪದ್ಮಸ್ಮಿತ್ ಅಧಿಕಾರಿ ಉಪಸ್ಥಿತರಿದ್ದರು.







