ಹಿಂದಿ ರಾಷ್ಟ್ರಭಾಷೆ ಅಲ್ಲವೆಂದ ಸುದೀಪ್; ಹೌದೆಂದ ಅಜಯ್ ದೇವಗನ್: ಟ್ವಿಟರ್‌ನಲ್ಲಿ ʼಸ್ಟಾರ್-ವಾರ್ʼ

ಮುಂಬೈ/ಬೆಂಗಳೂರು: ಹಿಂದಿ ರಾಷ್ಟ್ರ ಭಾಷೆ ಅಲ್ಲ, ಭಾರತದ ಅಧಿಕೃತ 22 ಭಾಷೆಗಳಲ್ಲಿ ಹಿಂದಿ ಕೂಡಾ ಒಂದು ಎಂಬ ಚರ್ಚೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ನಟ ಸುದೀಪ್ ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಾಲಿವುಡ್ ನಟ ಅಜಯ್ ದೇವಗನ್, ಹಿಂದಿ ರಾಷ್ಟ್ರೆ ಭಾಷೆ ಆಗಿತ್ತು, ಮುಂದೆಯೂ ಆಗಿರುತ್ತದೆ ಎಂದು ಹೇಳುವ ಮೂಲಕ ವಿವಾದವನ್ನು ಕೆದಕಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ʼದಕ್ಷಿಣ ಭಾರತ ಚಿತ್ರ ನಿರ್ಮಾಪಕರು ತಮ್ಮ ಸಿನೆಮಾಗಳನ್ನು ಪ್ಯಾನ್ ಇಂಡಿಯಾ ಸಿನೆಮಾ ಎಂದು ಹೇಳಬೇಡಿ. ಹಿಂದಿ ಕೂಡಾ ನಮ್ಮ ಭಾಷೆಗಳಂತಹ ಒಂದು ಭಾಷೆ, ಅದು ರಾಷ್ಟ್ರ ಭಾಷೆ ಅಲ್ಲ, ಅದು ಎಂದೂ ಆಗಿರಲಿಲ್ಲʼ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದರು.
ʼಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಪ್ಯಾನ್ ಇಂಡಿಯಾ ಎಂದು ಹೇಳುವುದು ತಪ್ಪು. ಹಿಂದಿ ಸಿನಿಮಾದವರು ದಕ್ಷಿಣದ ಭಾರತದ ಭಾಷೆಗಳಿಗೆ ತಮ್ಮ ಸಿನಿಮಾಗಳನ್ನು ಡಬ್ಬಿಂಗ್ ಮಾಡಿದಾಗ ಅದನ್ನು ಪ್ಯಾನ್ ಇಂಡಿಯಾ ಕರೆಯುವುದಿಲ್ಲʼ ಎಂಬರ್ಥದಲ್ಲಿ ಸುದೀಪ್ ಮಾತನಾಡಿದ್ದರು. ಆ ಮೂಲಕ ಇತ್ತೀಚಿನ ವರ್ಷಗಳಲ್ಲಿ ಹುಟ್ಟಿರುವ ʼಪ್ಯಾನ್ ಇಂಡಿಯಾ ಸಿನೆಮಾʼ ಎಂಬ ಕಾನ್ಸೆಪ್ಟ್‌ಗೆ ಸುದೀಪ್ ತಮ್ಮದೇ ವ್ಯಾಖ್ಯಾನ ನೀಡಿದ್ದರು.
ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದು ಸುದೀಪ್ ನೀಡಿದ್ದ ಹೇಳಿಕೆಯನ್ನು ಹಿಂದಿ ಹೇರಿಕೆ ವಿರೋಧಿಗಳು ವ್ಯಾಪಕವಾಗಿ ಹಂಚಿಕೊಂಡಿದ್ದರು. ಈ ಹೇಳಿಕೆಗೆ ಬುಧವಾರ ಪ್ರತಿಕ್ರಿಯಿಸಿದ ಬಾಲಿವುಡ್ ನಟ ಅಜಯ್ ದೇವಗನ್ “ಸಹೋದರ ಸುದೀಪ್, ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದಾದರೆ ನಿಮ್ಮ ಮಾತೃಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಯಾಕೆ ಬಿಡುಗಡೆ ಮಾಡುತ್ತೀರಿ? ಹಿಂದಿ ನಮ್ಮ ಮಾತೃಭಾಷೆ ಮತ್ತು ರಾಷ್ಟ್ರಭಾಷೆ ಆಗಿದ್ದು, ಇಂದೂ ಮತ್ತು ಎಂದೆಂದಿಗೂ ಹಾಗೆಯೇ ಇರುತ್ತದೆ.” ಎಂದು ಟ್ವೀಟ್ ಮಾಡಿದ್ದರು.
ಅಜಯ್ ದೇವಗನ್ ಟ್ವೀಟ್ ಮಾಡುತ್ತಿದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಒಂದು ಭಾಷೆಗೆ ಡಬ್ ಆಗುವ ಕಾರಣಕ್ಕೆ ಅದು ರಾಷ್ಟ್ರ ಭಾಷೆಯಾಗುತ್ತದೆಯೇ ಎಂದು ಹಲವರು ಪ್ರಶ್ನಿಸಿದ್ದರು. ಅಲ್ಲದೆ, ದೇವಗನ್ ಅಭಿನಯದ ʼದೃಶ್ಯಂʼ ಸಿನೆಮಾ ಚೀನೀ ಭಾಷೆಗೆ ಡಬ್ ಆಗಿರುವುದನ್ನು ಉಲ್ಲೇಖಿಸಿದ ನೆಟ್ಟಿಗರೊಬ್ಬರು, ಹಾಗಾದರೆ, ಚೀನಿ ನಮ್ಮ ರಾಷ್ಟ್ರ ಭಾಷೆಯೇ ಎಂದು ಪ್ರಶ್ನಿಸಿದ್ದರು. ದಕ್ಷಿಣ ಭಾರತ ಸಿನೆಮಾಗಳಾದ ʼಸಿಂಗಂ, ಕೈದಿ, ದೃಶ್ಯಂʼ ಮೊದಲಾದ ಸಿನೆಮಾಗಳನ್ನು ಹಿಂದಿಯಲ್ಲಿ ಅಜಯ್ ದೇವಗನ್ ರಿಮೇಕ್ ಮಾಡುವ ಬಗ್ಗೆಯೂ ಹಲವರು ತಕರಾರು ಎತ್ತಿದ್ದು, ದಕ್ಷಿಣ ಭಾರತೀಯ ಚಿತ್ರಗಳು ಹಿಂದಿಯಲ್ಲಿ ಡಬ್ ಮಾಡದಿದ್ದರೆ, ಅದನ್ನು ರಿಮೇಕ್ ಮಾಡಬಹುದೆಂಬ ಆಲೋಚನೆ ಇದೆಯೇ ಎಂದು ಅಜಯ್ ದೇವಗನ್ ರನ್ನು ಉಲ್ಲೇಖಿಸಿ ನೆಟ್ಟಿಗರು ಪ್ರಶ್ನಿಸಿದ್ದರು.
ಅಜಯ್ ಟ್ವೀಟ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಅಜಯ್ ಗೆ ಪ್ರತಿಕ್ರಿಯೆ ನೀಡಿದ ಸುದೀಪ್, ನನ್ನ ಹೇಳಿಕೆಯ ಉದ್ದೇಶ ಮತ್ತು ಅರ್ಥವನ್ನು ತಪ್ಪಾಗಿ ಗ್ರಹಿಸಿದ್ದೀರಿ, ನೇರವಾಗಿ ಸಿಕ್ಕಾಗ ನಾನು ವಿವರಿಸಬಲ್ಲೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
“ನಾನು ದೇಶದ ಎಲ್ಲಾ ಭಾಷೆಯನ್ನು ಪ್ರೀತಿಸುತ್ತೇನೆ ಹಾಗೂ ಗೌರವಿಸುತ್ತೇನೆ. ನಾನು ಈ ವಿಷಯವನ್ನು ಹೇಳಿರುವುದು ಸಂಪೂರ್ಣ ಬೇರೆ ಸನ್ನಿವೇಶದಲ್ಲಿ, ಈ ವಿಷಯ ಇಲ್ಲಿಗೆ ನಿಲ್ಲಲಿ ಎಂದು ಬಯಸುತ್ತೇನೆ. ನಾನು ಹಾಗೆ ಹೇಳಿರುವುದರ ಹಿಂದಿನ ಉದ್ದೇಶವೇನು ಎನ್ನುವುದು ನಿಮಗೆ ಸಂಪೂರ್ಣವಾಗಿ ಬೇರೆಯೇ ಆಯಾಮದಲ್ಲಿ ತಲುಪಿದೆ ಎಂದು ನಾನು ಭಾವಿಸುತ್ತೇನೆ. ನಿಮ್ಮನ್ನು ನೇರವಾಗಿ ಭೇಟಿಯಾದಾಗ ನಾನು ಯಾಕೆ ಹಾಗೆ ಹೇಳಿದ್ದೇನೆಂದು ತಿಳಿಸಬಲ್ಲೆ. ಇದು ನೋವುಂಟು ಮಾಡುವ, ಪ್ರಚೋದಿಸುವ ಅಥವಾ ಯಾವುದೇ ಚರ್ಚೆಯನ್ನು ಪ್ರಾಂಭಿಸಲು ನೀಡಿದ ಹೇಳಿಕೆ ಅಲ್ಲ. ನಾನು ಯಾಕೆ ಆ ರೀತಿ ಮಾಡಲಿ ಸರ್” ಎಂದು ಸುದೀಪ್ ಅಜಯ್ ಅವರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.
ಮುಂದುವರೆದು, “ನೀವು ಹಿಂದಿಯಲ್ಲಿ ಕಳುಹಿಸಿದ ಟೆಕ್ಸ್ಟ್ ನನಗೆ ಅರ್ಥವಾಗಿದೆ. ಯಾಕೆಂದರೆ, ನಾವು ಹಿಂದಿಯನ್ನು ಗೌರವಿಸಿದ್ದೇವೆ, ಪ್ರೀತಿಸಿದ್ದೇವೆ ಮತ್ತು ಕಲಿತಿದ್ದೇವೆ. ಆದರೆ ಸರ್, ನನ್ನ ಪ್ರತಿಕ್ರಿಯೆಯನ್ನು ಕನ್ನಡದಲ್ಲಿ ಟೈಪ್ ಮಾಡಿದರೆ ಪರಿಸ್ಥಿತಿ ಏನಾಗಬಹುದು ಎಂದು ಯೋಚಿಸುತ್ತಿದ್ದೆ.!! ನಾವೂ ಭಾರತಕ್ಕೆ ಸೇರಿದವರಲ್ಲವೇ ಸಾರ್?” ಎಂದು ಸುದೀಪ್ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅಜಯ್ ದೇವಗನ್, “ನಮಸ್ಕಾರ ಸುದೀಪ್, ನೀವು ಒಬ್ಬ ಸ್ನೇಹಿತ. ತಪ್ಪು ತಿಳುವಳಿಕೆಯನ್ನು ತೆರವುಗೊಳಿಸಿದ್ದಕ್ಕಾಗಿ ಧನ್ಯವಾದಗಳು. ನಾನು ಯಾವಾಗಲೂ ಚಿತ್ರರಂಗವನ್ನು ಒಂದು ಎಂದು ಭಾವಿಸುತ್ತೇನೆ. ನಾವು ಎಲ್ಲಾ ಭಾಷೆಗಳನ್ನು ಗೌರವಿಸುತ್ತೇವೆ ಮತ್ತು ಪ್ರತಿಯೊಬ್ಬರೂ ನಮ್ಮ ಭಾಷೆಯನ್ನು ಗೌರವಿಸಬೇಕೆಂದು ನಾವು ನಿರೀಕ್ಷಿಸುತ್ತೇವೆ. ಬಹುಶಃ,ಅನುವಾದದಲ್ಲಿ ಏನಾದರೂ ತಪ್ಪಾಗಿರಬಹುದು” ಎಂದು ಹೇಳಿಕೆ ನೀಡಿದ್ದಾರೆ. ಆ ಮೂಲಕ, ತಾನು ಅರ್ಥೈಸಿದ್ದರಲ್ಲಿ ಏನಾದರೂ ತಪ್ಪಿರಬಹುದು ಎಂದು ಹೇಳಿ ವಿವಾದಕ್ಕೆ ಅಂತ್ಯ ಹಾಡಲು ದೇವಗನ್ ಪ್ರಯತ್ನಿಸಿದ್ದಾರೆ.
ಇದಕ್ಕೆ ಪರೋಕ್ಷವಾಗಿ ಅಸಮಾಧಾನದ ಪ್ರತಿಕ್ರಿಯೆ ನೀಡಿದ ಸುದೀಪ್, “ಅನುವಾದ ಹಾಗೂ ವ್ಯಾಖ್ಯಾನಗಳು ಗ್ರಹಿಕೆ ಸರ್, ಸಂಪೂರ್ಣ ವಿಷಯ ತಿಳಿಯದೆ ಪ್ರತಿಕ್ರಿಯಿಸದಿರಲು ಅದೇ ಕಾರಣ. ಅದಕ್ಕಾಗಿ ನಿಮ್ಮನ್ನು ನಾನು ದೂಷಿಸುವುದಿಲ್ಲ. ಅದಾಗ್ಯೂ, ಸೃಜನಶೀಲ ಕಾರಣಗಳಿಗಾಗಿ ನಿಮ್ಮಿಂದ ಟ್ವೀಟ್ ಗಳನ್ನು ಪಡೆದಿದ್ದರೆ ಅದು ನನ್ನ ಸಂತಸದ ಕ್ಷಣಗಳಾಗುತ್ತಿತ್ತು ಅಜಯ್ ದೇವಗನ್ ಸರ್..” ಎಂದು ಟ್ವೀಟ್ ಮಾಡಿದ್ದಾರೆ.
ಆದರೆ, ಹಿಂದಿ ರಾಷ್ಟ್ರ ಭಾಷೆ ಎಂದು ಅಜಯ್ ದೇವಗನ್ ಉದ್ಧಟತನದ ಹೇಳಿಕೆಯನ್ನು ಖಂಡಿಸದ ಸುದೀಪ್ ಬಗ್ಗೆ ಹಲವರು ತಕರಾರು ಎತ್ತಿದ್ದಾರೆ, ತಮಿಳು ನಟರಾಗಿದ್ದರೆ, ಇಷ್ಟು ಹೊತ್ತಿಗೆ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡುತ್ತಿದ್ದರು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇನ್ನೇನು ಬಿಡುಗಡೆಯಾಗಲಿರುವ ʼವಿಕ್ರಾಂತ್ ರೋಣʼ ಚಿತ್ರಕ್ಕೆ ಯಾವುದೇ ತೊಂದರೆ ಆಗಬಾರದೆಂದು ಸುದೀಪ್ ಸೌಮ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆಂದೂ ಕೆಲವರು ಹೇಳುತ್ತಿದ್ದಾರೆ. ಇನ್ನು ಕೆಲವರು, ಕನ್ನಡದ ಸಹ ನಟರಿಗೆ ತೀಕ್ಷ್ಣ ಪ್ರತಿಕ್ರಿಯೆಗಳನ್ನು ನೀಡುತ್ತಾ ಬಂದ ಸುದೀಪ್ ಬಾಲಿವುಡ್ ನಟರ ಮುಂದೆ ಸೌಮ್ಯವಾದರೇ ಎಂದು ಪ್ರಶ್ನಿಸುತ್ತಿದ್ದಾರೆ.
.@KicchaSudeep मेरे भाई,
— Ajay Devgn (@ajaydevgn) April 27, 2022
आपके अनुसार अगर हिंदी हमारी राष्ट्रीय भाषा नहीं है तो आप अपनी मातृभाषा की फ़िल्मों को हिंदी में डब करके क्यूँ रिलीज़ करते हैं?
हिंदी हमारी मातृभाषा और राष्ट्रीय भाषा थी, है और हमेशा रहेगी।
जन गण मन ।
Hello @ajaydevgn sir.. the context to why i said tat line is entirely different to the way I guess it has reached you. Probably wil emphasis on why the statement was made when I see you in person. It wasn't to hurt,Provoke or to start any debate. Why would I sir https://t.co/w1jIugFid6
— Kichcha Sudeepa (@KicchaSudeep) April 27, 2022
I love and respect every language of our country sir. I would want this topic to rest,,, as I said the line in a totally different context.
— Kichcha Sudeepa (@KicchaSudeep) April 27, 2022
Mch luv and wshs to you always.
Hoping to seeing you soon.
Hi @KicchaSudeep, You are a friend. thanks for clearing up the misunderstanding. I’ve always thought of the film industry as one. We respect all languages and we expect everyone to respect our language as well. Perhaps, something was lost in translation
— Ajay Devgn (@ajaydevgn) April 27, 2022
Translation & interpretations are perspectives sir. Tats the reason not reacting wothout knowing the complete matter,,,matters.:)
— Kichcha Sudeepa (@KicchaSudeep) April 27, 2022
I don't blame you @ajaydevgn sir. Perhaps it would have been a happy moment if i had received a tweet from u for a creative reason.
Luv&Regards https://t.co/lRWfTYfFQi
And sir @ajaydevgn ,,
— Kichcha Sudeepa (@KicchaSudeep) April 27, 2022
I did understand the txt you sent in hindi. Tats only coz we all have respected,loved and learnt hindi.
No offense sir,,,but was wondering what'd the situation be if my response was typed in kannada.!!
Don't we too belong to India sir.







