ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ | ದಿವ್ಯಾ ಹಾಗರಗಿ ನಿರೀಕ್ಷಣಾ ಜಾಮೀನಿಗೆ ಸಿಐಡಿ ತಕರಾರು ಅರ್ಜಿ: ಎ.29ಕ್ಕೆ ವಿಚಾರಣೆ

ದಿವ್ಯಾ ಹಾಗರಗಿ
ಕಲಬುರಗಿ, ಎ.27: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ರೂವಾರಿ ಎನ್ನಲಾದ ಜ್ಞಾನಜ್ಯೋತಿ ಶಾಲೆಯ ಮಾಲಕಿ ದಿವ್ಯಾ ಹಾಗರಗಿ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಗೆ ವಿರೋಧವಾಗಿ ಸಿಐಡಿ ಸಲ್ಲಿಸಿದ ತಕರಾರು ಅರ್ಜಿ ವಿಚಾರಣೆಯನ್ನು ಕಲಬುರಗಿ ಜಿಲ್ಲಾ ನ್ಯಾಯಾಲಯ ಎ.29ಕ್ಕೆ ನಿಗದಿ ಮಾಡಿದೆ.
ದಿವ್ಯಾ ಹಾಗರಗಿ, ಕಾಶಿನಾಥ್, ಮಂಜುನಾಥ ಮೇಳಕುಂದಿ, ಅರ್ಚನಾ ಹೊನಗೇರಿ, ಸುನಂದಾ ಅವರ ಜಾಮೀನಿಗೆ ಸಿಐಡಿ ತಕರಾರು ಅರ್ಜಿ ಸಲ್ಲಿಸಲಾಗಿದೆ. ಇದು ಸಂಘಟಿತ ಅಪರಾಧ. ಜಾಮೀನು ಕೊಟ್ಟರೆ ಸಾಕ್ಷಿ ನಾಶಪಡಿಸುವ ಸಾಧ್ಯತೆ ಇದೆ. ಹೀಗಾಗಿ, ಈ ಐವರಿಗೆ ನಿರೀಕ್ಷಣಾ ಜಾಮೀನು ನೀಡಬೇಡಿ ಎಂದು ನ್ಯಾಯಾಲಯಕ್ಕೆ ಸಿಐಡಿ ತಕರಾರು ಅರ್ಜಿ ಸಲ್ಲಿಸಿದೆ.
16ನೆ ಆರೋಪಿ ಸಿಐಡಿ ಕಸ್ಟಡಿಗೆ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಬಳಕೆ ಮಾಡಿ ಪರೀಕ್ಷೆ ಬರೆದ ಆರೋಪದ ಮೇಲೆ ಮಂಗಳವಾರ ಸಿಐಡಿ ಬಂಧಿಸಿದ 16ನೆ ಆರೋಪಿ ಎನ್.ವಿ.ಸುನೀಲ್ ಎಂಬಾತನನ್ನು ವಿಚಾರಣೆಗಾಗಿ 8 ದಿನ ಸಿಐಡಿ ಕಸ್ಟಡಿಗೆ ನೀಡಿ 3ನೇ ಜೆಎಂಎಫ್ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ದಾಖಲಾತಿ ಪರಿಶೀಲನೆ ಸಂದರ್ಭದಲ್ಲಿ ಸಿಐಡಿ ಬಲೆಗೆ ಬಿದ್ದಿದ್ದ ಸುನೀಲ್ ಎಂಬಾತನನ್ನು ಬೆಂಗಳೂರಿನ ಸಿಐಡಿ ಕಚೇರಿಯಲ್ಲೇ ಬಂಧಿಸಿ ಕಲಬುರಗಿಗೆ ತರಲಾಗಿತ್ತು.







