ಕೇರಳ ವಿವಿಯ ಎಡವಟ್ಟು: ವಿದ್ಯಾರ್ಥಿಗೆ ಪ್ರಶ್ನೆಪತ್ರಿಕೆ ಬದಲು ಕೀ ಉತ್ತರಗಳ ನೀಡಿಕೆ, ಪರೀಕ್ಷೆಯೇ ರದ್ದು

PTI
ಹೊಸದಿಲ್ಲಿ,ಎ.27: ಕೇರಳ ವಿವಿಯು ಮತ್ತೊಮ್ಮೆ ಭಾರೀ ಎಡವಟ್ಟನ್ನು ಮಾಡಿದೆ. ಕೋವಿಡ್ನಿಂದಾಗಿ ಬಿಎಸ್ಸಿ ಇಲೆಕ್ಟ್ರಾನಿಕ್ಸ್ ವಿದ್ಯಾರ್ಥಿಯೋರ್ವನಿಗೆ ‘ಸಿಗ್ನಲ್ಸ್ ಆ್ಯಂಡ್ ಸಿಸ್ಟಮ್ಸ್ ’ವಿಷಯದಲ್ಲಿ ಮರುಪರೀಕ್ಷೆಯನ್ನು ಏರ್ಪಡಿಸಲಾಗಿತ್ತು ಮತ್ತು ಪ್ರಶ್ನೆಪತ್ರಿಕೆಯ ಬದಲು ಮುದ್ರಿತ ಕೀ ಉತ್ತರಗಳು ವಿದ್ಯಾರ್ಥಿಯ ಕೈಸೇರಿದ್ದವು.ವಿದ್ಯಾರ್ಥಿಯು ಅಧಿಕಾರಿಗಳಿಂದ ಸ್ಪಷ್ಟನೆ ಕೋರುವ ಬದಲು ಉತ್ತರ ಪತ್ರಿಕೆಯನ್ನು ತುಂಬಿ ಅದನ್ನು ಮೇಲ್ವಿಚಾರಕರಿಗೆ ಸಲ್ಲಿಸಿದ್ದ. ವಿವಿಯ ಕಡೆಯಿಂದ ತಪ್ಪು ನಡೆದಿರುವುದನ್ನು ಮೌಲ್ಯಮಾಪಕರು ಪತ್ತೆ ಹಚ್ಚಿದ ಬಳಿಕವೇ ಈ ಬೃಹತ್ ಪ್ರಮಾದ ಬೆಳಕಿಗೆ ಬಂದಿತ್ತು.
ಮರುಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು,ಮೇ 3ರಂದು ಇನ್ನೊಮ್ಮೆ ಮರುಪರೀಕ್ಷೆ ನಡೆಯಲಿದೆ.
ನಾಲ್ಕನೇ ಸೆಮಿಸ್ಟರ್ನ ಬಿಎಸ್ಸಿ ಇಲೆಕ್ಟ್ರಾನಿಕ್ಸ್ ವಿದ್ಯಾರ್ಥಿಯು ಕೋವಿಡ್ನಿಂದಾಗಿ ಪರೀಕ್ಷೆಗೆ ಹಾಜರಾಗಿರಲಿಲ್ಲ,ಹೀಗಾಗಿ ಫೆಬ್ರವರಿಯಲ್ಲಿ ಮರುಪರೀಕ್ಷೆಯನ್ನು ನಡೆಸಲಾಗಿತ್ತು.ಪರೀಕ್ಷೆಗಳ ನಿಯಂತ್ರಕರ ಕಚೇರಿಯು ಕಣ್ತಪ್ಪಿನಿಂದ ಪರೀಕ್ಷೆಯ ಕೀ ಉತ್ತರಗಳನ್ನು ಮುದ್ರಿಸಿತ್ತು.ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಯಾಗಲೀ ಮೇಲ್ವಿಚಾರಕರಾಗಲೀ ಈ ವಿಷಯವನ್ನು ವರದಿ ಮಾಡಿರಲಿಲ್ಲ. ಮೇಲ್ವಿಚಾರಕರಿಗೆ ಈ ತಪ್ಪಿನ ಅರಿವಿತ್ತೇ ಎನ್ನುವುದು ಸ್ಪಷ್ಟವಾಗಿಲ್ಲ. ವಿವಿಯು ಪರೀಕ್ಷೆಯನ್ನು ರದ್ದುಗೊಳಿಸಿದ ಬಳಿಕ ಕುಲಪತಿಗಳು ವಿಚಾರಣೆಗೆ ಆದೇಶಿಸಿದ್ದಾರೆ.







