ಮಂಗಳೂರು: ಮೊರಾರ್ಜಿ ವಸತಿ ಕಾಲೇಜು ಪ್ರವೇಶಕ್ಕೆ ಅರ್ಜಿ ಆಹ್ವಾನ
ಮಂಗಳೂರು : ಜಿಲ್ಲೆಯ ಸಮಾಜ ಕಲ್ಯಾಣ ಇಲಾಖಾ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಗಳೂರು ತಾಲೂಕಿನ ಮೆನ್ನಬೆಟ್ಟು ಗ್ರಾಮದ ಕಮ್ಮಾಜೆ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜಿಗೆ ೨೦೨೨-೨೩ನೇ ಸಾಲಿನ ಪ್ರಥಮ ಪಿಯುಸಿ ಪ್ರವೇಶಕ್ಕಾಗಿ ಅರ್ಜಿ ಅಹ್ವಾನಿಸಲಾಗಿದೆ.
ಪ್ರಥಮ ಪಿಯುಸಿಯ ಪಿಸಿಎಂಬಿ ಹಾಗೂ ಪಿಸಿಎಂಸಿ ಸಂಯೋಜನೆಗಳಿಗೆ ತಲಾ ೪೦ ವಿದ್ಯಾರ್ಥಿಗಳನ್ನು ಎಸೆಸೆಲ್ಸಿ ಅಂಕ ಮತ್ತು ಸರಕಾರದ ಮೀಸಲಾತಿ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ೨೦೨೧-೨೨ನೇ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲದೆ ಊಟ, ವಸತಿ, ಸಮವಸ್ತ್ರ, ಪಠ್ಯಪುಸ್ತಕ, ಇನ್ನಿತರ ಸಾಮಗ್ರಿಗಳು ಮತ್ತು ಸಿಇಟಿ ಹಾಗೂ ನೀಟ್ ಪರೀಕ್ಷೆಗಳ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು.
ಅಭ್ಯರ್ಥಿಯು ತನ್ನ ಎಸ್‌ಎಟಿಎಸ್ ಸಂಖ್ಯೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಸಂಬಂಧಿತ ಇತರೆ ದಾಖಲೆಗಳೊಂದಿಗೆ ಹತ್ತಿರದ ವಸತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡ ಎರಡು ದಿನದೊಳಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರಾಂಶುಪಾಲರ ದೂ.ಸಂ:೮೪೩೧೭೩೯೦೮೭ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.





