ವಿಧಾನಮಂಡಲ ಸಮಿತಿ ಸಭೆಗೆ ಏಕಾಏಕಿ ನುಗ್ಗಿದ ವಕೀಲ, ಎಸ್ಸಿ-ಎಸ್ಟಿ ಸಭೆಯಲ್ಲಿ ಗದ್ದಲ

ಬೆಂಗಳೂರು, ಎ.27: ಕರ್ನಾಟಕ ವಿಧಾನಮಂಡಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ ನಡೆಸಿದ ಸಭೆಯಲ್ಲಿ ಗದ್ದಲ, ಗಲಾಟೆ ನಡೆದ ಪ್ರಸಂಗ ಜರುಗಿತು.
ಬುಧವಾರ ಇಲ್ಲಿನ ಶಾಸಕರ ಭವನ 5ರ ಮೊದಲನೆ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷರಾಗಿರುವ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲ್ಲಿ ಸಭೆ ನಡೆಯುತ್ತಿತ್ತು.
ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಪುತ್ರಿ ಬೇಡ ಜಂಗಮ ಜಾತಿಯ ಪ್ರಮಾಣಪತ್ರ ಪಡೆದಿರುವುದೂ ಸೇರಿದಂತೆ ಹಲವು ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಬೇಕಿತ್ತು.
ಈ ವೇಳೆ ಏಕಾಏಕಿ ಸಭಾಂಗಣಕ್ಕೆ ನುಗ್ಗಿದ ಸಾಮಾಜಿಕ ಹೋರಾಟಗಾರ, ನ್ಯಾಯವಾದಿ ಬಿ.ಡಿ. ಹಿರೇಮಠ, ಏರು ಧ್ವನಿಯಲ್ಲಿ ನಿಮ್ಮನ್ನು ನೋಡ್ಕೋತೀನಿ, ಏನು ಮಾಡ್ಕೋತೀರೋ ಮಾಡ್ಕೊಳ್ಳಿ ಎಂದು ಕೂಗಿದರು.
ತಕ್ಷಣ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಹಿರೇಮಠ ಅವರನ್ನು ಹೊರಕ್ಕೆ ಕರೆತಂದರು. ಆದರೆ, ಈ ಕುರಿತು ಪ್ರತಿಕ್ರಿಯಿಸಲು ಸಮಿತಿಯ ಸದಸ್ಯರು ನಿರಾಕರಿಸಿದರು.
ಬೇಡ ಜಂಗಮ ಜಾತಿಯ ಹೆಸರಿನಲ್ಲಿ ಇತರ ಜಾತಿಯ ಜನರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ವಂಚಿಸುತ್ತಿರುವ ಕುರಿತು ಸಮಿತಿ ಸದಸ್ಯರು ಚರ್ಚೆ ನಡೆಸಿದರು.







