ಕೊಳೆಗೇರಿ ನಿವಾಸಿಗಳಿಗೆ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಬಿಎಸ್ಪಿ ಪ್ರತಿಭಟನೆ: ಸಚಿವ ಸೋಮಣ್ಣ ವಜಾಕ್ಕೆ ಆಗ್ರಹ

ಬೆಂಗಳೂರು, ಎ.27: ವಸತಿ ಸಚಿವ ವಿ.ಸೋಮಣ್ಣ ಅವರು ಶೋಷಿತ ಹಾಗೂ ಬಡವರ ವಸತಿಗಳನ್ನು ದೋಚುತ್ತಿದ್ದಾರೆ ಎಂದು ಆರೋಪಿಸಿ ಬೃಹತ್ ಪ್ರತಿಭಟನೆ ನಡೆಸಿದ ಬಹುಜನ ಸಮಾಜ ಪಕ್ಷದ ಸದಸ್ಯರು, ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಬುಧವಾರ ಇಲ್ಲಿನ ಫ್ರೀಡಂ ಪಾರ್ಕ್ ಮೈದಾನದಲ್ಲಿ ಜಮಾಯಿಸಿದ ಬಿಎಸ್ಪಿ ಸದಸ್ಯರು, ಕಾರ್ಯಕರ್ತರು, ಮುಖಂಡರು, ವಸತಿ ಇಲಾಖೆದಡಿಯ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ಕಾರ್ಯ ನಿರ್ವಹಿಸುತ್ತಿದ್ದು, ವಸತಿ ಸಚಿವರು, ಬಿಲ್ಡರ್ ಗಳು ಜೊತೆಗೂಡಿ ಒಕ್ಕೂಟವೊಂದನ್ನು ರಚಿಸಿಕೊಂಡು ಬಡವರಿಗೆ ಅನ್ಯಾಯವೆಸಗುತ್ತಿದ್ದಾರೆ. ಅಷ್ಟೇ ಅಲ್ಲದೆ, ಹಲವು ದಶಕಗಳಿಂದ ಇಲ್ಲೇ ನೆಲೆಸಿದ್ದರೂ, ಹಕ್ಕುಪತ್ರ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಎಸ್ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ, ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಮಂಜೂರಾಗಿರುವ ಯೋಜನೆ, ಅನುದಾನದಲ್ಲಿ ಬಹುಕೋಟಿ ಹಗರಣ ನಡೆದಿದ್ದು, ಈ ಸಂಬಂಧ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಮುಖವಾಗಿ ಭುವನೇಶ್ವರಿ ಕೊಳಗೇರಿ ನಿವಾಸಿಗಳ ಮೇಲೆ ಶಾಸಕ ಎಂ.ಕೃಷ್ಣಪ್ಪ, ಸಂಸದ ಡಿ.ಕೆ.ಸುರೇಶ್ ಅವರಿಂದ ದೌರ್ಜನ್ಯ ನಿಲ್ಲಬೇಕು. ಭುವನೇಶ್ವರಿ ನಗರದಲ್ಲಿ ವಾಸ ಮಾಡುತ್ತಿರುವ 430 ಕೊಳಗೇರಿ ನಿವಾಸಿಗಳನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಅದೇ ರೀತಿ ಬಿಎಸ್ಪಿ ಜಿಲ್ಲಾಧ್ಯಕ್ಷ ಫರ್ವೇಝ್ ಖಾನ್ ಅವರ ಮೇಲೆ ಕೊಳಗೇರಿ ಅಭಿವೃದ್ಧಿ ಮಂಡಳಿ ದಾಖಲಿಸಿರುವ ಮೊಕದ್ದಮೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಎಸ್‍ಸಿಪಿ, ಟಿಎಸ್‍ಪಿ ಹಣದಲ್ಲಿ ಎಸ್ಸಿ, ಎಸ್ಟಿ ಹಾಗೂ ಪೌರಕಾರ್ಮಿಕರಿಗೆ ಬಿಬಿಎಂಪಿ ವತಿಯಿಂದ 1110 ನಿವೇಶನಗಳನ್ನು ಹಂಚಿಕೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದರೂ, ಸಚಿವ ವಿ.ಸೋಮಣ್ಣ, ಎಸ್.ಆರ್.ವಿಶ್ವನಾಥ್ ಇದನ್ನು ರದ್ದುಗೊಳಿಸಲು ಮುಂದಾಗಿರುವ ಕ್ರಮ ನಿಲ್ಲಿಸಬೇಕು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನಿಲ್ಲಬೇಕು ಎಂದು ಅವರು ಮನವಿ ಮಾಡಿದರು.







