ದೇಶದ್ರೋಹ ಕಾನೂನು ಪ್ರಶ್ನಿಸಿ ಮನವಿ: ಮೇ 5ರಂದು ಸುಪ್ರೀಂಕೋರ್ಟ್ ನಿಂದ ಅಂತಿಮ ವಿಚಾರಣೆ ಆರಂಭ

ಹೊಸದಿಲ್ಲಿ, ಎ 27: ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ ಮನವಿಗಳ ಗುಚ್ಚಕ್ಕೆ ಈ ವಾರದ ಅಂತ್ಯದೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿದೆ.
ಈ ಪ್ರಕರಣದ ಅಂತಿಮ ವಿಚಾರಣೆ ಮೇ 5ರಂದು ಆರಂಭವಾಗಲಿದೆ ಹಾಗೂ ವಿಚಾರಣೆ ಮುಂದೂಡಲು ಕೋರುವ ಯಾವುದೇ ಮನವಿಗೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಮೂವರು ಸದಸ್ಯರ ಪೀಠ ಹೇಳಿದೆ.
‘‘ಈ ವಾರದ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ನಾವು ಕೇಂದ್ರ ಸರಕಾರಕ್ಕೆ ನಿರ್ದೇಶಿಸಿದ್ದೇವೆ. ಅಫಿಡಾವಿಟ್ ಗೆ ಉತ್ತರವನ್ನು ಮಂಗಳವಾರದ ಒಳಗೆ ಸಲ್ಲಿಸಬೇಕು. ಯಾವುದೇ ಮುಂದೂಡಿಕೆ ಇಲ್ಲದೆ ಮೇ 5ರಂದು ಮನವಿಯ ಅಂತಿಮ ವಿಚಾರಣೆ ನಡೆಸಲು ಪಟ್ಟಿ ಮಾಡಲಾಗಿದೆ’’ ಎಂದು ಪೀಠ ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿ ದೂರುದಾರರ ಪರವಾಗಿ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು ವಾದಿಸಲಿದ್ದಾರೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ವಿಚಾರಣೆ ವೇಳೆ ಹಿರಿಯ ನ್ಯಾಯವಾದಿ ಸಂಜಯ್ ಪಾರಿಕ್ ಅವರು, ಪಿಯುಸಿಎಲ್ ಸಲ್ಲಿಸಿದ ಮನವಿಯನ್ನು ವಿಚಾರಣೆಗೆ ಪಟ್ಟಿ ಮಾಡಿಲ್ಲ ಎಂದು ಹೇಳಿದರು. ಅದಕ್ಕೆ ಪೀಠ, ‘‘ನೀವು ಪ್ರಕರಣವನ್ನು ಪರಿಹರಿಸಲು ಬಯಸುತ್ತಿರಾ ಅಥವಾ ಎಲ್ಲ ಮನವಿಗಳ ವಿಚಾರಣೆಗೆ ಬಯಸುತ್ತೀರಾ?. ವಿಚಾರಣೆ ವಿಳಂಬವಾಗಲು ಬಯಸಿದರೆ, ಅದು ನಿಮಗೆ ಬಿಟ್ಟದ್ದು’’ ಎಂದು ಹೇಳಿತು.
ವಸಾಹತುಶಾಹಿ ಕಾಲದ ದೇಶದ್ರೋಹದ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಕಳೆದ ವರ್ಷ ಜುಲೈಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ಸ್ವಾತಂತ್ರ ಚಳವಳಿಯನ್ನು ಹತ್ತಿಕ್ಕಲು ಮಹಾತ್ಮಾ ಗಾಂಧಿ ಅವರಂತಹ ವ್ಯಕ್ತಿಗಳನ್ನು ಮೌನವಾಗಿಸಲು ಬ್ರಿಟೀಷರು ಬಳಕೆ ಮಾಡಿದ ಕಾನೂನನ್ನು ಯಾಕೆ ಹಿಂಪಡೆಯಬಾರದು ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿತ್ತು.







