ಮಲೆಯಾಳಂ ನಟ ವಿಜಯ್ ಬಾಬು ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

Photo: Facebook/Vijaybabuofficial
ತಿರುವನಂತಪುರ, ಎ 27: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿ ಮಲೆಯಾಳಂ ನಟ ವಿಜಯ ಬಾಬು ವಿರುದ್ಧ ಕೇರಳ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.
ಚಲನಚಿತ್ರಗಳಲ್ಲಿ ಪಾತ್ರ ನೀಡುವುದಾಗಿ ಆಮಿಷ ನೀಡಿ ಬಾಬು ಹಲವು ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ನಟಿಯೊಬ್ಬರು ಆರೋಪಿಸಿದ್ದಾರೆ. ಅವರ ದೂರಿನ ಆಧಾರದಲ್ಲಿ ಎಪ್ರಿಲ್ 22ರಂದು ಪ್ರಕರಣ ದಾಖಲಿಸಲಾಗಿತ್ತು.
ಬುಧವಾರ ಫೇಸ್ಬುಕ್ ಪುಟದಲ್ಲಿ ಲೈವ್ ಆಗಿ ಕಾಣಿಸಿಕೊಂಡ ಬಾಬು, ಮಹಿಳೆಯ ಆರೋಪವನ್ನು ತಿರಸ್ಕರಿಸಿದ್ದಾರೆ. ಅಲ್ಲದೆ, ದೂರುದಾರ ಮಹಿಳೆಯ ಹೆಸರನ್ನು ಕೂಡ ಬಹಿರಂಗಪಡಿಸಿದ್ದಾರೆ.ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಗುರುತು ಬಹಿರಂಗಪಡಿಸಿರುವುದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 228ಎ ಪ್ರಕಾರ ಅಪರಾಧ. ದೂರುದಾರ ಮಹಿಳೆಯ ಹೆಸರು ಬಹಿರಂಗಗೊಳಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಇನ್ನೊಂದು ಪ್ರಕರಣ ದಾಖಲಿಸಲಾಗುವುದು ಎಂದು ಉಪ ಪೊಲೀಸ್ ಆಯುಕ್ತ ವಿ.ಯು. ಕುರಿಯಕೋಸ್ ತಿಳಿಸಿದ್ದಾರೆ.
‘ತನಿಖೆ ನಡೆಯುತ್ತಿದೆ. ಅತ್ಯಾಚಾರ ಪ್ರಕರಣ ದಾಖಲಿಸಿದ ಬಳಿಕ ಬಾಬು ನಾಪತ್ತೆಯಾಗಿದ್ದಾರೆ’ಎಂದು ಅವರು ಹೇಳಿದ್ದಾರೆ. ತನಗೆ 2018ರಿಂದ ಈ ಮಹಿಳೆಯ ಪರಿಚಯ ಇದೆ. ತನ್ನ ಒಂದು ಚಿತ್ರದಲ್ಲಿ ಆಡಿಷನ್ ಬಳಿಕ ಅವರಿಗೆ ಪಾತ್ರ ನೀಡಿದ್ದೆ ಎಂದು ಬಾಬು ಪ್ರತಿಪಾದಿಸಿದ್ದಾರೆ.





