ರಶ್ಯ-ಉಕ್ರೇನ್ ಸ್ನೇಹದ ಸಂಕೇತವಾಗಿದ್ದ ಸೋವಿಯತ್ ಯುಗದ ಪ್ರತಿಮೆ ನಾಶ

ಕೀವ್, ಎ.27: ಈ ಹಿಂದೆ ಉಕ್ರೇನ್ ಮತ್ತು ರಶ್ಯ ನಡುವಿನ ಸ್ನೇಹದ ಸಂಕೇತವಾಗಿ, ಕೀವ್ ನಲ್ಲಿ ಸ್ಥಾಪಿಸಲಾಗಿದ್ದ ಸೋವಿಯತ್ ಒಕ್ಕೂಟ ಯುಗದ ಬೃಹತ್ ಪ್ರತಿಮೆಯನ್ನು ನೆಲಸಮಗೊಳಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.
ಕೀವ್ ಮಧ್ಯಭಾಗದಲ್ಲಿರುವ ಬೃಹತ್ ಪ್ರತಿಮೆಯನ್ನು ತೆರವುಗೊಳಿಸುವಂತೆ ಆದೇಶಿಸಿರುವ ನಗರದ ಮೇಯರ್ ವಿಟಾಲಿ ಕ್ಲಿಶ್ಕೊ, ರಶ್ಯವು ಉಕ್ರೇನ್ ನ ಮಿಲಿಯಾಂತರ ಜನರ ಜೀವನ ಮತ್ತು ಯುರೋಪ್ ಶಾಂತಿಯನ್ನು ಹಾಳುಗೆಡವಿದೆ ಎಂದಿದ್ದಾರೆ.
27 ಅಡಿ ಎತ್ತರದ ಕಂಚಿನ ಈ ಪ್ರತಿಮೆಯಲ್ಲಿ ಸ್ಥಂಭದ ಮೇಲೆ ಉಕ್ರೇನ್ ಮತ್ತು ರಶ್ಯದ ಕಾರ್ಮಿಕರು ಒಟ್ಟಿಗೆ ಕೆಲಸ ಮಾಡುವುದನ್ನು ಚಿತ್ರಿಸಲಾಗಿದ್ದು ಎರಡೂ ದೇಶಗಳ ನಡುವಿನ ಸ್ನೇಹದ ಸಂಕೇತವಾಗಿತ್ತು. 1982ರಲ್ಲಿ ಸೋವಿಯತ್ ಒಕ್ಕೂಟದ 60ನೇ ವರ್ಷಾಚರಣೆಯ ಸಂದರ್ಭದಲ್ಲಿ ಸ್ಥಾಪಿಸಲಾದ ಈ ಪ್ರತಿಮೆಯು ಬೃಹತ್ ತಾಮ್ರದ ಕಮಾನಿನ ಕೆಳಗೆ ಇದ್ದು ಇದನ್ನು ಜನರ ಸ್ನೇಹದ ಕಮಾನು ಎಂದು ಕರೆಯಲಾಗುತ್ತಿದೆ.
ನಮ್ಮ ದೇಶವನ್ನು ಮತ್ತು ಇಲ್ಲಿನ ಜನರ ಶಾಂತಿಯನ್ನು ನಾಶಗೊಳಿಸುವ ರಶ್ಯದ ಬರ್ಬರ ಬಯಕೆಯನ್ನು ಖಂಡಿಸಿ ಈ ಪ್ರತಿಮೆ ತೆರವುಗೊಳಿಸಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಈ ಪ್ರತಿಮೆಗೆ ಅರ್ಥ ಉಳಿದಿಲ್ಲ. ಪ್ರತಿಮೆಯನ್ನು ತೆರವುಗೊಳಿಸುವ ಕೆಲಸಕ್ಕೆ ಕೆಲ ದಿನಗಳ ಹಿಂದೆ ಚಾಲನೆ ನೀಡಿದ್ದು ಮಂಗಳವಾರ ಸಂಪೂರ್ಣ ಕೆಳಗುರುಳಿಸಲಾಗಿದೆ ಎಂದು ವಿಟಾಲಿ ಕ್ಲಿಶ್ಕೊ ಹೇಳಿದ್ದಾರೆ. ಈಗ ಪ್ರತಿಮೆಯ ಮೇಲಿದ್ದ ಬೃಹತ್ ಕಮಾನಿಗೆ ಉಕ್ರೇನ್ ಧ್ವಜದ ಬಣ್ಣ ಬಳಿದು ‘ಉಕ್ರೇನ್ ಜನರ ಸ್ವಾತಂತ್ರ್ಯದ ಕಮಾನು’ ಎಂದು ಮರು ನಾಮಕರಣಗೊಳಿಸಲಾಗುವುದು ಎಂದವರು ಹೇಳಿದ್ದಾರೆ.
ನೆಲಕ್ಕುರುಳಿದ ಪ್ರತಿಮೆಯ ವೀಡಿಯೊ ಶೇರ್ ಮಾಡಿರುವ ಇಂಟರ್ನೆಟ್ ಬಳಕೆದಾರರು ‘ಈಗ ಇದು ಉಭಯ ದೇಶಗಳ ನಡುವಿನ ವಾಸ್ತವಿಕ ಸ್ನೇಹವನ್ನು ಸಂಕೇತಿಸುತ್ತದೆ’ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
A 40 year old Ukraine-Russian friendship monument has been pulled down in Kyiv. People cheered as the soviet-era bronze statue came crashing down. pic.twitter.com/F9qK23avjq
— SBS News (@SBSNews) April 27, 2022







