ಖೇಲೋ ಇಂಡಿಯಾ ವಿವಿ ಗೇಮ್ಸ್: ಮಂಗಳೂರು ವಿವಿಯ ಮರಿಯಾ ವೇಟ್ಲಿಫ್ಟಿಂಗ್ನಲ್ಲಿ ರಾಷ್ಟ್ರೀಯ ದಾಖಲೆ
ಈಜು ಸ್ಪರ್ಧೆಯಲ್ಲಿ 6 ಚಿನ್ನ ಬಾಚಿದ ಜೈನ್ ವಿವಿಯ ಶಿವ ಶ್ರೀಧರ್

ಯ್ಯಾನ್ ಮಾರಿಯಾ
ಬೆಂಗಳೂರು, ಎ.27: ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ನಲ್ಲಿ ಈಜು ಕೊಳದಲ್ಲಿ ಪ್ರಭುತ್ವವನ್ನು ಮುಂದುವರಿಸಿದ ಆತಿಥೇಯ ಜೈನ್ ಯುನಿವರ್ಸಿಟಿಯ ಶಿವ ಶ್ರೀಧರ್ ಬುಧವಾರ ಮತ್ತೆರಡು ಚಿನ್ನ ಗೆಲ್ಲುವ ಮೂಲಕ ಒಟ್ಟು ಕೂಟದಲ್ಲಿ ಆರನೆ ಚಿನ್ನ ಗೆದ್ದು ಪ್ರಭುತ್ವ ಸಾಧಿಸಿದ್ದಾರೆ. ಇದರೊಂದಿಗೆ ಆತಿಥೇಯ ಜೈನ್ ವಿವಿ 11 ಚಿನ್ನ, 4 ಬೆಳ್ಳಿ, 2 ಕಂಚಿನ ಪದಕಗಳ ಮೂಲಕ ಪದಕಗಳ ಪಟ್ಟಿಯಲ್ಲಿ ಅಗ್ರ ಸ್ಥಾನ(17) ಕಾಯ್ದುಕೊಂಡಿದೆ.
ಬೆಳಗ್ಗೆ 400 ಮೀ. ವೈಯಕ್ತಿಕ ಮೆಡ್ಲೆಯಲ್ಲಿ ಚಿನ್ನದ ಪದಕದೊಂದಿಗೆ ತನ್ನದೇ ದಾಖಲೆ ಮುರಿದಿದ್ದ ಶಿವ ಶ್ರೀಧರ್ ಸಂಜೆ ನಡೆದ 100 ಮೀ. ಬಟರ್ಫ್ಲೈನಲ್ಲಿ 56:26 ಸೆಕೆಂಡುಗಳಲ್ಲಿ ಗುರಿ ತಲುಪಿ ದಿನದ ಎರಡನೇ ಮತ್ತು ಕೂಟದ ಆರನೇ ಚಿನ್ನ ಗೆದ್ದರು.
ಮಂಗಳೂರಿಗೆ ವೇಟ್ಲಿಫ್ಟಿಂಗ್ನಲ್ಲಿ ದಾಖಲೆಯ ಚಿನ್ನ: ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸುತ್ತಿರುವ ಯ್ಯಾನ್ ಮಾರಿಯಾ ಎಂ.ಟಿ. ವನಿತೆಯರ +87 ಕೆಜಿ ವೇಟ್ಲಿಫ್ಟಿಂಗ್ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ಬರೆದು ಚಿನ್ನದ ಸಾಧನೆ ಮಾಡಿದ್ದಾರೆ. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ನ +87ಕೆಜಿ ವಿಭಾಗದ ಕ್ಲೀನ್ ಮತ್ತು ಜೆರ್ಕ್ ನಲ್ಲಿ 129 ಕೆಜಿ ಭಾರವೆತ್ತುವ ಮೂಲಕ ಮಾರಿಯಾ ನೂತನ ರಾಷ್ಟ್ರೀಯ ದಾಖಲೆ ಬರೆದರು.
ಪಂಜಾಬ್ನ ಮನ್ಪ್ರೀತ್ ಕೌರ್ ಅವರು 128 ಕೆಜಿ ಭಾರವೆತ್ತಿ ನೂತನ ದಾಖಲೆ ಬರೆದಿದ್ದರು. ಸ್ಕ್ಯಾಚ್ನಲ್ಲಿ 101 ಕೆಜಿ ಮತ್ತು ಕ್ಲೀನ್ ಮತ್ತು ಜೆರ್ಕ್ನಲ್ಲಿ 129 ಕೆಜಿ ಸೇರಿ ಒಟ್ಟು 230 ಕೆಜಿ ಭಾರವೆತ್ತಿ ಸ್ವರ್ಣ ಗೆದ್ದರು. ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾನಿಲಯದ ಟಿ. ಸತ್ಯ ಜ್ಯೋತಿ 189 ಕೆಜಿ ಭಾರವೆತ್ತಿ ಬೆಳ್ಳಿ ಪದಕ ಗೆದ್ದರು. ಕುರುಕ್ಷೇತ್ರ ವಿಶ್ವವಿದ್ಯಾನಿಲಯದ ಮುಸ್ಕಾನ್ ಸಿಂಗ್ 184 ಕೆಜಿ ಭಾರವೆತ್ತಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.







