ತನ್ನ 'ವಾಕ್ ಸ್ವಾತಂತ್ರ್ಯ' ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ ಎಲಾನ್ ಮಸ್ಕ್ ಹೇಳಿದ್ದೇನು?

PHOTO PTI
ವಾಷಿಂಗ್ಟನ್, ಎ.27: ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು ಖರೀದಿಸಿದ ಬಳಿಕ ತಾನು ಬಳಸಿದ 'ವಾಕ್ ಸ್ವಾತಂತ್ರ್ಯ' ಎಂಬ ಪದದ ಬಗ್ಗೆ ಟೆಸ್ಲಾದ ಸಿಇಒ ಎಲಾನ್ ಮಸ್ಕ್ ಸ್ಪಷ್ಟನೆ ನೀಡಿದ್ದಾರೆ.
ಓ್ವಟರ್ ಖರೀದಿಸಿದ ಬಳಿಕ ಮಾತನಾಡಿದ್ದ ಮಸ್ಕ್, ಟ್ವಿಟರ್ ನಲ್ಲಿ 'ವಾಕ್ ಸ್ವಾತಂತ್ರ್ಯ' ಕ್ಕೆ ಅವಕಾಶ ಖಾತರಿಪಡಿಸುವುದಾಗಿ ಘೋಷಿಸಿದ್ದರು. ಈ ಹೇಳಿಕೆಯ ಬಗ್ಗೆ ಹಲವರು ಅಚ್ಚರಿ ಸೂಚಿಸಿದ್ದರು. ಮಸ್ಕ್ ಅವರು ಪ್ರತಿಪಾದಿಸಿದ 'ವಾಕ್ ಸ್ವಾತಂತ್ರ್ಯ' ದ್ವೇಷದ ಹೇಳಿಕೆ ಮತ್ತು ತಪ್ಪು ಮಾಹಿತಿ ಪ್ರಸಾರಕ್ಕೆ ಹೆಚ್ಚಿನ ಅವಕಾಶ ಮಾಡಿಕೊಡಬಹುದು ಮತ್ತು ಈ ಮೂಲಕ ಹಿಂಸಾಚಾರವನ್ನು ಉತ್ತೇಜಿಸಬಹುದು ಎಂದು ಮಾನವ ಹಕ್ಕುಗಳ ಸಂಘಟನೆಗಳು ಆತಂಕ ವ್ಯಕ್ತಪಡಿಸಿದ್ದವು.
ಇದಕ್ಕೆ ಮಂಗಳವಾರ ಸ್ಪಷ್ಟನೆ ನೀಡಿರುವ ಮಸ್ಕ್ 'ವಾಕ್ ಸ್ವಾತಂತ್ರ್ಯʼ ಎಂಬ ಪದವನ್ನು ಕಾನೂನಿಗೆ ಹೊಂದಿಕೆಯಾಗುವ ಎಂಬ ರೀತಿಯಲ್ಲಿ ಸರಳವಾಗಿ ಬಳಸಿದ್ದೇನೆ. ಕಾನೂನನ್ನು ಮೀರಿ ನಡೆಸುವ ಸೆನ್ಸಾರ್ಶಿಪ್ ಗೆ ನಾನು ವಿರೋಧಿಯಾಗಿದ್ದೇನೆ ಎಂದಿದ್ದಾರೆ. ಜನತೆ 'ವಾಕ್ ಸ್ವಾತಂತ್ರ್ಯ' ಬಯಸಿದರೆ, ಈ ನಿಟ್ಟಿನಲ್ಲಿ ಕಾನೂನು ಜಾರಿಗೊಳಿಸುವಂತೆ ಅವರು ಸರಕಾರವನ್ನು ಕೇಳಬೇಕು. ಕಾನೂನನ್ನು ಮೀರಿ ಸಾಗುವುದು ಜನತೆಯ ಆಶಯಕ್ಕೆ ವಿರುದ್ಧವಾಗಿದೆ ಎಂದವರು ಹೇಳಿದ್ದಾರೆ.
ಹೇಳಿಕೆಗಾಗಿ ತನ್ನನ್ನು ಪ್ರಶ್ನಿಸುವವರನ್ನು ಟೀಕಿಸಿರುವ ಮಸ್ಕ್, ಈ ರೀತಿಯ ಪ್ರಶ್ನೆಯು 'ವಾಕ್ ಸ್ವಾತಂತ್ರ್ಯ' ಎಂದರೆ ಭಯಪಡುವವರ ತೀವ್ರ ರಕ್ಷಣಾತ್ಮಕ ಪ್ರತಿಕ್ರಿಯೆಯಾಗಿದೆ ಎಂದಿದ್ದಾರೆ.







