ಐಪಿಎಲ್: ರಾಹುಲ್ ತೆವಾಟಿಯಾ-ರಶೀದ್ ಖಾನ್ ಸಾಹಸ, ಗುಜರಾತ್ಗೆ ರೋಚಕ ಜಯ

Photo:twitter
ಮುಂಬೈ, ಎ.27: ವೇಗದ ಬೌಲರ್ ಉಮ್ರಾನ್ ಮಲಿಕ್ ಮಾರಕ ಬೌಲಿಂಗ್ ದಾಳಿಯ(5-25) ಹೊರತಾಗಿಯೂ ಕೊನೆಯ ಹಂತದಲ್ಲಿ ರಾಹುಲ್ ತೆವಾಟಿಯಾ(ಔಟಾಗದೆ 40 ರನ್, 21 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ರಶೀದ್ ಖಾನ್(ಔಟಾಗದೆ 31 ರನ್, 11 ಎಸೆತ, 4 ಸಿಕ್ಸರ್) ಸಾಹಸದಿಂದ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಗುಜರಾತ್ ಟೈಟಾನ್ಸ್ 5 ವಿಕೆಟ್ಗಳ ಅಂತರದಿಂದ ರೋಚಕ ಗೆಲುವು ದಾಖಲಿಸಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ ನಡೆದ ಐಪಿಎಲ್ನ 40ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು. ಇದಕ್ಕುತ್ತರವಾಗಿ ಗುಜರಾತ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು.
ಗುಜರಾತ್ ಗೆಲುವಿಗೆ ಕೊನೆಯ ಓವರ್ನಲ್ಲಿ 22 ರನ್ ಅಗತ್ಯವಿತ್ತು. ಜಾನ್ಸೆನ್ ಬೌಲಿಂಗ್ನಲ್ಲಿ ತೆವಾಟಿಯಾ ಹಾಗೂ ರಶೀದ್ 4 ಸಿಕ್ಸರ್ಗಳನ್ನು ಸಿಡಿಸಿ ಗುಜರಾತ್ಗೆ ರೋಚಕ ಜಯ ತಂದುಕೊಟ್ಟರು. ತೆವಾಟಿಯಾ ಮೊದಲ ಓವರ್ನ ಮೊದಲ ಎಸೆತವನ್ನು ಸಿಕ್ಸರ್ಗೆ ಅಟ್ಟಿದರೆ, 19.3, 19.5 ಹಾಗೂ 19.6ನೇ ಓವರ್ನಲ್ಲಿ ರಶೀದ್ ಸಿಕ್ಸರ್ ಸಿಡಿಸಿ ಹೈದರಾಬಾದ್ ಕೈಯಿಂದ ಗೆಲುವು ಕಸಿದುಕೊಂಡರು. ಈ ಜೋಡಿ 6ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 24 ಎಸೆತಗಳಲ್ಲಿ 59 ರನ್ ಸೇರಿಸಿತು.
ಜಮ್ಮುವಿನ ವೇಗದ ಬೌಲರ್ ಉಮ್ರಾನ್ ಮಲಿಕ್ ದಾಳಿಗೆ ಗುಜರಾತ್ ಅಕ್ಷರಶಃ ಕಂಗಾಲಾಯಿತು. ಮೊದಲ ಬಾರಿ ಐದು ವಿಕೆಟ್ ಗೊಂಚಲು(5-25) ಪಡೆದ ಮಲಿಕ್ ಗುಜರಾತ್ನ ಅಗ್ರ ಕ್ರಮಾಂಕದ ಶುಭಮನ್ ಗಿಲ್(22 ರನ್),ನಾಯಕ ಹಾರ್ದಿಕ್ ಪಾಂಡ್ಯ(10),ವೃದ್ಧಿಮಾನ್ ಸಹಾ(68, 38 ಎಸೆತ, 11 ಬೌಂಡರಿ, 1 ಸಿಕ್ಸರ್), ಡೇವಿಡ್ ಮಿಲ್ಲರ್(17)ಹಾಗೂ ಅಭಿನವ್ ಮನೋಹರ್(0) ವಿಕೆಟನ್ನು ಕಬಳಿಸಿದರು. ಈ ಬಾರಿಯ ಐಪಿಎಲ್ನಲ್ಲಿ ಯಜುವೇಂದ್ರ ಚಹಾಲ್(ರಾಜಸ್ಥಾನ) ಬಳಿಕ 5 ವಿಕೆಟ್ ಗೊಂಚಲು ಪಡೆದ 2ನೇ ಬೌಲರ್ ಎನಿಸಿಕೊಂಡರು.
ಇದಕ್ಕೂ ಮೊದಲು ಹೈದರಾಬಾದ್ ತಂಡವು ನಾಯಕ ಕೇನ್ ವಿಲಿಯಮ್ಸನ್(5 ರನ್), ರಾಹುಲ್ ತ್ರಿಪಾಠಿ(16 ರನ್),ನಿಕೊಲಸ್ ಪೂರನ್(3 ರನ್), ವಾಷಿಂಗ್ಟನ್ ಸುಂದರ್(3 ರನ್)ವಿಕೆಟ್ಗಳನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡರೂ ),ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ (65 ರನ್, 42 ಎಸೆತ, 6 ಬೌಂಡರಿ, 3 ಸಿಕ್ಸರ್)ಹಾಗೂ ಮರ್ಕ್ರಾಮ್(56 ರನ್, 40 ಎಸೆತ, 2 ಬೌಂಡರಿ, 3 ಸಿಕ್ಸರ್) 3ನೇ ವಿಕೆಟ್ಗೆ ದಾಖಲಿಸಿದ 96 ರನ್ ಜೊತೆಯಾಟದ ನೆರವಿನಿಂದ ಉತ್ತಮ ಮೊತ್ತ ಕಲೆ ಹಾಕಿತು. 7ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 33 ರನ್ ಸೇರಿಸಿದ ಶಶಾಂಕ್ ಸಿಂಗ್ (ಔಟಾಗದೆ 25) ಹಾಗೂ ಜಾನ್ಸನ್(ಔಟಾಗದೆ 8 ರನ್ )ತಂಡದ ಸ್ಕೋರನ್ನು 195ಕ್ಕೆ ತಲುಪಿಸಿದರು.
ಗುಜರಾತ್ ಪರ ಮುಹಮ್ಮದ್ ಶಮಿ(3-39)ಯಶಸ್ವಿ ಬೌಲರ್ ಎನಿಸಿಕೊಂಡರು. ಯಶ್ ದಯಾಳ್(1-24) ಹಾಗೂ ಅಲ್ಜಾರಿ ಜೋಸೆಫ್(1-35)ತಲಾ ಒಂದು ವಿಕೆಟ್ ಪಡೆದರು.