ಭೂಮಿಯತ್ತ ಸಾಗುವ ಕ್ಷುದ್ರಗ್ರಹಗಳ ಮೇಲೆ ಪ್ರತಿದಾಳಿ ನಡೆಸುವ ತಂತ್ರಜ್ಞಾನಕ್ಕೆ ಚೀನಾ ಯೋಜನೆ

PHOTO :TWITTER
ಬೀಜಿಂಗ್, ಎ.27: ಬಾಹ್ಯಾಕಾಶದಲ್ಲಿ ಭೂಮಿಯತ್ತ ಧಾವಿಸುವ ಕ್ಷುದ್ರಗ್ರಹಗಳನ್ನು ಪತ್ತೆಹಚ್ಚಿ ಅದರ ಮೇಲೆ ದಾಳಿ ಮಾಡುವ ಬಾಹ್ಯಾಕಾಶ ಮೇಲ್ವಿಚಾರಣೆ ಮತ್ತು ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಚೀನಾದ ಬಾಹ್ಯಾಕಾಶ ಸಂಸ್ಥೆ ಘೋಷಿಸಿದೆ.
ಕ್ಷುದ್ರಗ್ರಹಕ್ಕೆ ಉದ್ದೇಶಪೂರ್ವಕವಾಗಿ ಬಾಹ್ಯಾಕಾಶ ನೌಕೆಯನ್ನು ಡಿಕ್ಕಿಹೊಡೆಸುವ ಮೂಲಕ ನೂತನ ವ್ಯವಸ್ಥೆಯನ್ನು ಪರೀಕ್ಷಿಸಲಾಗುವುದು ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ(ಸಿಎಸ್ಎನ್ಎ)ಯ ಉಪ ಮುಖ್ಯಸ್ಥ ವು ಯನ್ಹುವಾ ಹೇಳಿರುವುದಾಗಿ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಭೂಮಿಯತ್ತ ಅಪಾಯಕಾರಿಯಾಗಿ ಧಾವಿಸಿ ಬರುವ ಕ್ಷುದ್ರಗ್ರಹವನ್ನು ಪತ್ತೆಹಚ್ಚಿ ಅದರ ಮೇಲೆ ಆಕ್ರಮಣ ನಡೆಸಿ ಅದರ ಕಕ್ಷೆ ಬದಲಿಸುವ ಈ ಯೋಜನೆಗೆ 2025ರ ಆದಿಭಾಗದಲ್ಲಿ ಚಾಲನೆ ದೊರಕಲಿದೆ ಎಂದು ವರದಿ ಹೇಳಿದೆ.
ಬಾಹ್ಯಾಕಾಶ ನೌಕೆ, ಭೂಮಿ ಮತ್ತು ಮಾನವಕುಲವನ್ನು ರಕ್ಷಿಸುವ ರೀತಿಯಲ್ಲಿ ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಮೇಲ್ವಿಚಾರಣೆ ಮತ್ತು ಎಚ್ಚರಿಕೆ ಸಂದೇಶ ರವಾನಿಸುವ ವ್ಯವಸ್ಥೆಯನ್ನು ಭೂಮಿಯಲ್ಲಿ ಮತ್ತು ಬಾಹ್ಯಾಕಾಶದಲ್ಲಿ ಅಳವಡಿಸಲಾಗುವುದು. ಮನುಷ್ಯರು ಬಾಹ್ಯಾಕಾಶದಲ್ಲಿ ನಡೆಸುವ ಚಟುವಟಿಕೆಗೆ ಬೆದರಿಕೆ ಒಡ್ಡುವ ಕ್ಷುದ್ರಗ್ರಹವನ್ನು ಪತ್ತೆಹಚ್ಚಿ ಅಪಾಯದ ಪ್ರಮಾಣವನ್ನು ಗುರುತಿಸುವ ಸಾಮರ್ಥ್ಯ ಇದಕ್ಕಿದೆ. ಮುಂದಿನ ಹಂತ ಬೆದರಿಕೆಯನ್ನು ನಿವಾರಿಸುವ ಕ್ರಮವನ್ನು ಒಳಗೊಂಡಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಬಾಹ್ಯಾಕಾಶದಲ್ಲಿ ಭೂಮಿಯತ್ತ ಅಪಾಯಕಾರಿಯಾಗಿ ಧಾವಿಸಿ ಬರುವ ಕ್ಷುದ್ರಗ್ರಹವನ್ನು ಪತ್ತೆಹಚ್ಚಿ , ಅದಕ್ಕೆ ಅಪ್ಪಳಿಸಿ ಕಕ್ಷೆಯನ್ನು ಬದಲಿಸುವಂತೆ ಮಾಡುವ ಬಾಹ್ಯಾಕಾಶ ನೌಕೆಯನ್ನು ಅಂತರಿಕ್ಷಕ್ಕೆ ರವಾನಿಸುವ ಪರಿಕಲ್ಪನೆ ಇದಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಸಾಫ್ಟ್ವೇರ್ ಅಭಿವೃದ್ಧಿಗೊಳಿಸಿ, ಭೂಮಿಯ ರಕ್ಷಣೆಗಾಗಿ ಇತರ ದೇಶಗಳ ಸಹಕಾರದೊಂದಿಗೆ ಕಾರ್ಯಕ್ರಮ ರೂಪಿಸಲಾಗುವುದು ಎಂದು ಯನ್ಹುವಾ ಹೇಳಿದ್ದಾರೆ.
ಭೂಮಿಗೆ ಅಪ್ಪಳಿಸುವ ಕ್ಷುದ್ರಗ್ರಹಗಳ ಬೆದರಿಕೆಯ ಬಗ್ಗೆ ಗಮನಹರಿಸಲು ಚೀನಾದ ರಕ್ಷಣಾ ವ್ಯವಸ್ಥೆ ಪ್ರಮುಖ ಪೂರಕವಾಗಿದೆ ಮತ್ತು ಬೆದರಿಕೆ ನಿವಾರಿಸುವ ನಿಟ್ಟಿನಲ್ಲಿ ಚೀನಾ ಬಾಹ್ಯಾಕಾಶ ಸಂಸ್ಥೆ ರೂಪಿಸಲಿರುವ ಉಪಕ್ರಮವು ಮನುಕುಲದ ಉತ್ತಮ ಭವಿಷ್ಯಕ್ಕೆ ನೆರವಾಗಲಿದೆ ಎಂದು ರಕ್ಷಣಾ ತಜ್ಞ ಸೋಂಗ್ ಝಾಂಗ್ಪಿಂಗ್ ಹೇಳಿದ್ದಾರೆ. ಈ ವ್ಯವಸ್ಥೆ ಈಗ ಯೋಜನೆಯ ಸ್ಥಾಪನೆಯ ಹಂತದಲ್ಲಿದ್ದು ಅನುಮೋದನೆಗಾಗಿ ಪರಿಶೀಲಿಸಲಾಗುತ್ತಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.







