ಪ್ರಕ್ಷುಬ್ಧ ಸಾಮಾಜಿಕ ಪರಿಸ್ಥಿತಿಗೆ ನೇತಾಜಿ ಚಿಂತನೆ ಗುಳಿಗೆಯಂತಿದೆ: ರವೀಂದ್ರ ಭಟ್ಟ

ಬೆಂಗಳೂರು, ಎ.27: ಪ್ರಸಕ್ತ ಪ್ರಕ್ಷುಬ್ಧ ಸಾಮಾಜಿಕ ಪರಿಸ್ಥಿತಿಯಲ್ಲಿ ನೇತಾಜಿ ಅವರ ಕುರಿತಾದ ಪುಸ್ತಕವು ಗುಳಿಗೆಯಂತಿದ್ದು, ವೈಚಾರಿಕ ಚರ್ಚೆಗಳಿಗೆ ಪ್ರೇರೇಪಿಸುತ್ತದೆ ಎಂದು ಹಿರಿಯ ಪತ್ರಕರ್ತ ರವೀಂದ್ರ ಭಟ್ ಅಭಿಪ್ರಾಯಪಟ್ಟರು.
ಬುಧವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ(ಎಐಎಂಎಸ್‍ಎಸ್) ಆಯೋಜಿಸಿದ್ದ ‘ನೇತಾಜಿ ಸುಭಾಷ್‍ಚಂದ್ರ ಬೋಸ್’ ಪುಸ್ತಕ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾದ ನೇತಾಜಿಯವರು ಸಹಸ್ರ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಸ್ವತಂತ್ರ ಹೋರಾಟದಲ್ಲಿ ಧುಮುಕುವಂತೆ ಮಾಡಿ ಝಾನ್ಸಿರಾಣಿ ರೆಜಿಮೆಂಟನ್ನು ಕಟ್ಟಿದರು ಎಂದರು.
ಹಿರಿಯ ವಕೀಲೆ ಹೇಮಲತಾ ಮಹಿಷಿ ಅವರು ಮಾತನಾಡಿ, “ನೇತಾಜಿ ರಾಜಿರಹಿತ ಪಂಥದ ಅಪ್ರತಿಮ ನಾಯಕರಾಗಿದ್ದರು. ನೇತಾಜಿ ಇಡೀ ದೇಶದ ಜನರಿಗೆ ಸೇರಿದವರು. ಸ್ವತಂತ್ರ ಹೋರಾಟದಲ್ಲಿ ನೇತಾಜಿ ಅವರ ವ್ಯಕ್ತತ್ವವೇ ಅತ್ಯಂತ ಪ್ರೇರಕವಾಗಿತ್ತು. ಆದರೆ ಅವರ ವಿಚಾರಗಳನ್ನು ಪಾಲಿಸದ ರಾಜಕೀಯ ಪಕ್ಷಗಳು ನೇತಾಜಿ ಅವರ ಹೆಸರನ್ನು ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಬಯಲಿಗೆಳೆಯಬೇಕು ಮತ್ತು ಜನರ ಐಕ್ಯತೆಯನ್ನು ಎತ್ತಿಹಿಡಿಯಬೇಕು” ಎಂದು ಕರೆ ನೀಡಿದರು.
ಎಐಎಂಎಸ್‍ಎಸ್‍ನ ಅಖಿಲ ಭಾರತ ಉಪಾಧ್ಯಕ್ಷೆ ಡಾ.ಸುಧಾ ಕಾಮತ್ ಅವರು ಮಾತನಾಡಿ, “ನೇತಾಜಿ-ಗಾಂಧೀಜಿಯವರ ಕುರಿತಾದ ಅಧ್ಯಯನವೆಂದರೆ ಐತಿಹಾಸಿಕವಾಗಿ ಅವರ ನಡುವೆ ಇದ್ದ ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಅಭ್ಯಸಿಸುವುದೇ ಹೊರತು ವೈಯಕ್ತಿಕವಲ್ಲ. ಭಾರತದ ನವೋದಯದ ಹರಿಕಾರರಾದ ರಾಜಾರಾಮ್ ಮೋಹನ್‍ರಾಯ್, ವಿದ್ಯಾಸಾಗರ್, ಕುವೆಂಪು, ಶರತ್‍ಚಂದ್ರರು ಪ್ರಜಾತಾಂತ್ರಿಕ ಮತ್ತು ಧರ್ಮನಿರಪೇಕ್ಷತೆಯನ್ನು ಎತ್ತಿಹಿಡಿದರು. ಸ್ವಾತಂತ್ರ್ಯ ಹೋರಾಟಗಾರರಾದ ನೇತಾಜಿ, ಭಗತ್ ಸಿಂಗ್‍ರು ಇದನ್ನೇ ಎತ್ತಿಹಿಡಿದರು. ಧರ್ಮವು ಸಾರ್ವಜನಿಕ, ಸಾಮಾಜಿಕ-ರಾಜಕೀಯ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದರು.
ಇತ್ತೀಚಿಗೆ ಕಾಂಗ್ರೆಸ್-ಬಿಜೆಪಿ ನಾಯಕರು ಧರ್ಮವನ್ನು ಸಾಮಾಜಿಕ ವಿಷಯಗಳೊಂದಿಗೆ ಬೆರೆಸುತ್ತಿದ್ದಾರೆ. ಜನರು ಬೆಲೆ ಏರಿಕೆ, ನಿರುದ್ಯೋಗ, ಶಿಕ್ಷಣ ಮತ್ತು ಆರೋಗ್ಯದ ಸೌಲಭ್ಯದ ಕೊರತೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಾಗಿದ್ದರೂ, ಸರಕಾರ ಚಿಂತಿಸುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಐಎಂಎಸ್‍ಎಸ್‍ನ ಜಿಲ್ಲಾ ಕಾರ್ಯದರ್ಶಿ ಶಾಂತ ಎ. ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು, ಗೃಹಿಣಿಯರು ಉಪಸ್ಥಿತರಿದ್ದರು.
ಪರ್ಯಾಯ ರಾಜಕೀಯ ಶಕ್ತಿಯ ಅವಶ್ಯಕತೆ ಇದೆ
ಆಡಳಿತ ಪಕ್ಷ ಪ್ರತಿದಿನವು ಜನವಿರೋಧಿ ಅಜೆಂಡಾವನ್ನು ಪ್ರತಿಪಾದಿಸುತ್ತಿದೆ. ಜನಸಾಮಾನ್ಯರು ತಮ್ಮ ಅಜೆಂಡಾವನ್ನು ಮುಂದಿಡಬೇಕು. ನಿಜವಾದ ಧರ್ಮನಿರಪೇಕ್ಷತೆಯ ಅರ್ಥವನ್ನು ನಾವು ಹರಡಬೇಕು. ಆ ಮೂಲಕ ಜನರನ್ನು ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿ ಮೇಲೆತ್ತಬೇಕು. ಅದಕ್ಕಾಗಿ ನಮಗೊಂದು ಪರ್ಯಾಯ ರಾಜಕೀಯ ಶಕ್ತಿಯ ಅವಶ್ಯಕತೆ ಇದೆ. ಅದು ಜನಶಕ್ತಿಯಾಗಿ ಹೊರಬರಬೇಕು.
-ಶೋಭಾ ಎಸ್, ಎಐಎಂಎಸ್‍ಎಸ್ ರಾಜ್ಯ ಕಾರ್ಯದರ್ಶಿ







