ಸಿರಿಯಾ: ಇಸ್ರೇಲ್ ಕ್ಷಿಪಣಿ ದಾಳಿಯಲ್ಲಿ 9 ಮಂದಿ ಮೃತ್ಯು

PTI
ಬೈರೂತ್, ಎ.27: ಸಿರಿಯಾದ ದಮಾಸ್ಕಸ್ ಬಳಿ ಬುಧವಾರ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಸಿರಿಯಾದ 5 ಯೋಧರ ಸಹಿತ 9 ಮಂದಿ ಮೃತಪಟ್ಟಿರುವುದಾಗಿ ಮೂಲಗಳು ಹೇಳಿವೆ.
ಶಸ್ತ್ರಾಸ್ತ್ರ ದಾಸ್ತಾನು ಕೇಂದ್ರ ಮತ್ತು ಸಿರಿಯಾದಲ್ಲಿರುವ ಇರಾನ್ ಸೇನೆಗಳ ಹಲವು ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆದಿದೆ ಎಂದು ಮಾನವ ಹಕ್ಕುಗಳ ಸಂಘಟನೆಯ ಸಿರಿಯಾ ವೀಕ್ಷಕರ ಸಮಿತಿ ಹೇಳಿದೆ. ದಾಳಿಯಲ್ಲಿ ಕನಿಷ್ಟ 5 ಮಂದಿ ಮೃತಪಟ್ಟಿರುವುದಾಗಿ ಸಿರಿಯಾದ ಸರಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆ ಸನಾ ದೃಢಪಡಿಸಿದೆ. ಬುಧವಾರ ಬೆಳಿಗ್ಗೆ ಇಸ್ರೇಲ್ ಶತ್ರುಗಳು ದಮಾಸ್ಕಸ್ ಸುತ್ತಲಿನ ಹಲವು ನೆಲೆಗಳನ್ನು ಗುರಿಯಾಗಿಸಿ ವಾಯುದಾಳಿ ನಡೆಸಿದ್ದಾರೆ. 4 ಯೋಧರು ಮೃತಪಟ್ಟಿದ್ದು ಇತರ ಮೂವರು ಗಾಯಗೊಂಡಿದ್ದಾರೆ. ಅಲ್ಲದೆ ವ್ಯಾಪಕ ನಾಶ, ನಷ್ಟವಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಸನಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
5 ಪ್ರತ್ಯೇಕ ಸ್ಥಳವನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಸಿರಿಯಾದ 5 ಯೋಧರು ಮೃತಪಟ್ಟಿದ್ದು 8 ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟ ಇತರ ನಾಲ್ವರು ಇರಾನ್ ಬೆಂಬಲಿತ ಹೋರಾಟಗಾರರ ತಂಡದವರು ಎಂದು ಬ್ರಿಟನ್ ಮೂಲದ ಮಾನವ ಹಕ್ಕು ವೀಕ್ಷಕರ ಸಮಿತಿಯ ಮುಖ್ಯಸ್ಥ ರಮಿ ಅಬ್ದೆಲ್ ರಹ್ಮಾನ್ ಹೇಳಿದ್ದಾರೆ. 2011ರಲ್ಲಿ ಸಿರಿಯಾದಲ್ಲಿ ಯುದ್ಧ ಆರಂಭಗೊಂಡಂದಿನಿಂದ ಸಿರಿಯಾದ ಸರಕಾರಿ ಕೇಂದ್ರಗಳು, ಸಿರಿಯಾದ ಮಿತ್ರರಾಷ್ಟ್ರ ಇರಾನ್ ಬೆಂಬಲಿತ ಪಡೆಯ ನೆಲೆಯನ್ನು ಗುರಿಯಾಗಿಸಿ ನೂರಾರು ವಾಯುದಾಳಿಯನ್ನು ಇಸ್ರೇಲ್ ನಡೆಸಿದೆ. ತನ್ನ ನೆರೆರಾಷ್ಟ್ರವಾದ ಸಿರಿಯಾದಲ್ಲಿ ಕಟ್ಟಾವೈರಿ ಇರಾನ್ ಸೇನಾ ನೆಲೆ ಸ್ಥಾಪಿಸುವ ಪ್ರಯತ್ನ ತಡೆಯಲು ಈ ದಾಳಿ ಅನಿವಾರ್ಯವಾಗಿದೆ ಎಂದು ಇಸ್ರೇಲ್ ಹೇಳುತ್ತಿದೆ.







