ಶಾಲೆಗಳಲ್ಲಿ 6ರಿಂದ 12 ವರ್ಷದ ವರೆಗಿನ ಮಕ್ಕಳಿಗೆ ಲಸಿಕಾ ಅಭಿಯಾನ: ಮುಖ್ಯಮಂತ್ರಿ ಬೊಮ್ಮಾಯಿ
‘ಆರ್ಥಿಕ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲ'

ಬೆಂಗಳೂರು, ಎ. 27: ‘ಕೋವಿಡ್ ಸೋಂಕಿನ 4ನೆ ಅಲೆ ಸಾಧ್ಯತೆ ಹಿನ್ನೆಲೆಯಲ್ಲಿ ಪ್ರಧಾನಿ ಸೂಚನೆಯಂತೆ 6ರಿಂದ 12ವರ್ಷದ ವರೆಗಿನ ಮಕ್ಕಳಿಗೆ ಶಾಲೆಯಲ್ಲಿ ಅಭಿಯಾನ ರೀತಿಯಲ್ಲಿ ಲಸಿಕೆ ನೀಡಲಾಗುವುದು. 15ರಿಂದ 18 ವಯೋಮಾನದವರು ಹಾಗೂ 60 ವರ್ಷ ವಯಸ್ಸಿನವರಿಗೆ ಮುನ್ನೆಚ್ಚರಿಕಾ ಲಸಿಕೆಯನ್ನು ಹೆಚ್ಚಿಸುವ ಮೂಲಕ ಲಸಿಕಾ ಅಭಿಯಾನಕ್ಕೆ ಒತ್ತು ನೀಡಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬುಧವಾರ ಕೋವಿಡ್ ಸ್ಥಿತಿಗತಿ ಕುರಿತು ಪ್ರಧಾನಿ ನಡೆಸಿದ ವಿಡಿಯೋ ಸಂವಾದದ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಇಂದಿನ ಸಭೆಯಲ್ಲಿ ಕೋವಿಡ್ ಸ್ಥಿತಿಗತಿ ಬಗ್ಗೆ ವಿವರಣೆ ನೀಡಲಾಗಿದೆ. ಸದ್ಯಕ್ಕೆ ಕೋವಿಡ್ ನಿಯಂತ್ರಣದಲ್ಲಿದೆ. ಎ.9ರ ನಂತರ ಕೋವಿಡ್ ಪಾಸಿಟಿವಿಟಿ ದರ ಹೆಚ್ಚಿರುವುದರಿಂದ ಪರೀಕ್ಷೆಗಳನ್ನು ಹೆಚ್ಚಿಸಲಾಗುತ್ತಿದೆ. ಪ್ರತಿದಿನ 30ಸಾವಿರ ಪರೀಕ್ಷೆಗಳನ್ನು ಗುರಿ ಇದೆ. ಅಂತರರಾಷ್ಟ್ರೀಯ ಪ್ರಯಾಣಿಕರ ಶೇ.2ರಷ್ಟು ರ್ಯಾಂಡಮ್ ಪರೀಕ್ಷೆ, ಟೆಲಿ ಟ್ರ್ಯಾಕಿಂಗ್ ಮಾಡಲಾಗುವುದು. ಎಂಟು ದೇಶಗಳಿಂದ ಬರುವ ಪ್ರಯಾಣಿಕರ ಟ್ರ್ಯಾಕಿಂಗ್ ಮಾಡಲಾಗುವುದು' ಎಂದು ಹೇಳಿದರು.
ಆಸ್ಪತ್ರೆ ವ್ಯವಸ್ಥೆ: ‘50 ಸಾವಿರಕ್ಕಿಂತ ಹೆಚ್ಚಿನ ಬೆಡ್ ವ್ಯವಸ್ಥೆಯನ್ನು ಸರಕಾರಿ ಆಸ್ಪತ್ರೆಗಳಲ್ಲಿ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚು ಬೆಡ್‍ಗಳಿವೆ. ಆಕ್ಸಿಜನ್ ದಾಸ್ತಾನು ಸಾಕಷ್ಟಿದೆ. ಕೋವಿಡ್ ನಿಯಂತ್ರಣಕ್ಕೆ ಸಕಲ ಸನ್ನದ್ಧರಾಗಿದ್ದೇವೆ' ಎಂದ ಅವರು, ‘ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಲಸಿಕಾ ಅಭಿಯಾನ ಕೈಗೊಳ್ಳುವುದರ ಜೊತೆಗೆ ಟ್ರ್ಯಾಕ್, ಟ್ರೇಸ್, ಟ್ರೀಟ್, ಲಸಿಕೆ ಪಾಲಿಸಬೇಕು. ಮಾಸ್ಕ್, ವ್ಯಕ್ತಿಗತ ಅಂತರ ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯ ಪಾಲನೆ ಆಗಬೇಕು. ಜಿಲ್ಲಾ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕು' ಎಂದು ಸಲಹೆ ನೀಡಿದರು.
ಸುರಕ್ಷತಾ ಆಡಿಟ್: ‘ಪ್ರಮುಖ ಆಸ್ಪತ್ರೆಗಳಲ್ಲಿ ಸುರಕ್ಷತಾ ಆಡಿಟ್ ಕೈಗೊಳ್ಳಲಾಗುವುದು. ಲಸಿಕೆ ಅಭಿಯಾನದ ಮೂಲಕ ಕೋವಿಡ್ 3 ನೆ ಅಲೆಯನ್ನು ನಿಯಂತ್ರಿಸಲು ಸಾಧ್ಯವಾಯಿತು. ಲಸಿಕೆ ಅಭಿಯಾನ, ಮುಂಜಾಗ್ರತಾ ಕ್ರಮಗಳ ಜೊತೆಗೆ ಆರ್ಥಿಕತೆಯೂ ಮುಂದುವರೆಯಬೇಕು. ಜನರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು. ಇದು ಕೋವಿಡ್‍ನ ಮೂರು ಅಲೆಗಳಿಂದ ಕಲಿತಿರುವ ಪಾಠ' ಎಂದು ಅವರು ತಿಳಿಸಿದರು.
‘ರಾಜ್ಯದಲ್ಲಿ ಯಾವ ರೀತಿಯ ಕೋವಿಡ್ ನಿಯಂತ್ರಣ ಕ್ರಮಗಳು ಬರಬಹುದು' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಎಲ್ಲ ಆಸ್ಪತ್ರೆಗಳಲ್ಲಿನ ರೋಗಿಗಳ ಪರೀಕ್ಷೆಯನ್ನು ನಡೆಸಿ, ಪಾಸಿಟಿವ್ ಪ್ರಕರಣಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಲಾಗುವುದು. ಆಕ್ಸಿಜನ್ ಘಟಕಗಳಲ್ಲಿ 1,100 ಮೆ.ಟನ್ ಸಾಮಥ್ರ್ಯಕ್ಕೆ ಹೆಚ್ಚಿಸುವ ತೀರ್ಮಾನ ಮಾಡಲಾಗಿದ್ದು, ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.
ನಿಗಾ ವಹಿಸಲು ಸೂಚನೆ: ‘ಕೋವಿಡ್ ಮೂರೂ ಅಲೆಯನ್ನೂ ಸಮರ್ಥವಾಗಿ ಎದುರಿಸಲಾಗಿದ್ದು, ಈ ಅನುಭವದ ಮೇರೆಗೆ 4ನೆ ಅಲೆಯನ್ನೂ ಸಮರ್ಥವಾಗಿ ಎದುರಿಸುವ ಬಗ್ಗೆ ಆತ್ಮವಿಶ್ವಾಸವಿದೆ ಹಾಗೂ ಸರ್ವರೀತಿಯಿಂದಲೂ ಸನ್ನದ್ಧರಾಗಿದ್ದೇವೆ' ಎಂದ ಅವರು, ‘ಎ.9ರವರೆಗೆ ಪಾಸಿಟಿವಿಟಿ ದರ ಕಡಿಮೆ ಇತ್ತು. ನಂತರದಲ್ಲಿ 0.3ನಿಂದ 1.38ರ ವರಗೆ ಹಾಗೂ ಬೆಂಗಳೂರಿನಲ್ಲಿ 0.4 ನಿಂದ 2.07ಕ್ಕೆ ಏರಿಕೆಯಾಗಿದೆ' ಎಂದರು.
‘ರಾಜ್ಯದಲ್ಲಿ ಈವರೆಗೆ 1,686 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಕೋವಿಡ್‍ನಿಂದ ಯಾವುದೇ ಸಾವು ವರದಿಯಾಗಿಲ್ಲ. ಕೋವಿಡ್ ಪರೀಕ್ಷೆಗಳನ್ನು 30 ಸಾವಿರಕ್ಕೆ ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ 10 ಸಾವಿರ ಹಾಗೂ ಇತರೆ ಜಿಲ್ಲೆಗಳಲ್ಲಿ 20 ಸಾವಿರ ಪರೀಕ್ಷೆಗಳನ್ನು ಪ್ರತಿನಿತ್ಯ ನಡೆಸಲಾಗುವುದು. ವಿಮಾನ ನಿಲ್ದಾಣಗಳಲ್ಲಿ ದಕ್ಷಿಣ ಆಫ್ರಿಕಾ, ಥೈಲ್ಯಾಂಡ್, ಇಂಡೋನೇಷ್ಯಾ, ರಶ್ಯಾ, ಚೈನಾ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾದಿಂದ ಆಗಮಿಸುವ ಪ್ರಯಾಣಿಕರ ಪರೀಕ್ಷೆಗಳನ್ನು ಹೆಚ್ಚಿಸಿ ಟೆಲಿಟ್ಯಾಕಿಂಗ್ ಪ್ರಾರಂಭಿಸಲಾಗುವುದು' ಎಂದು ಅವರು ವಿವರಿಸಿದರು.
‘ರಾಜ್ಯದಲ್ಲಿ 10 ಜಿನೋಮ್ ಸೀಕ್ವೆನ್ಸಿಂಗ್ ಪ್ರಯೋಗಾಲಯಗಳಿದ್ದು, ಈವರೆಗೆ 8,890 ಪರೀಕ್ಷೆಗಳನ್ನು ಮಾಡಲಾಗಿದೆ. ಈ ಪೈಕಿ 4,449 ಪ್ರಕರಣಗಳು ಓಮಿಕ್ರಾನ್ ವೈರಾಣು ಎಂದು ದೃಢಪಟ್ಟಿದೆ. ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳು ಚಿಕಿತ್ಸೆ ಲಭ್ಯವಿದೆ. 1.43 ಲಕ್ಷ ಆಕ್ಷಿಜನ್ ಹಾಸಿಗೆಗಳು ಪ್ರಸ್ತುತ ಲಭ್ಯವಿದೆ. ಈಗಾಗಲೇ ಕೋವಿಡ್ ಸೂಕ್ತ ನಡವಳಿಕೆಗಳಾದ ಮಾಸ್ಕ್ ಧರಿಸುವುದು, ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಕುರಿತು ಕೇಂದ್ರ ಸರಕಾರ ಈಗಾಗಲೇ ನೀಡಿರುವ ನಿಯಮಗಳನ್ನು ಪಾಲಿಸಲಾಗುತ್ತಿದೆ. ಕರ್ನಾಟಕ ಲಸಿಕೆ ಅಭಿಯಾನದಲ್ಲಿ ಮುಂಚೂಣಿಯಲ್ಲಿದ್ದು, ಶೇ.98ರಷ್ಟು ಜನಸಂಖ್ಯೆಗೆ ಲಸಿಕೆ ಹಾಕಲಾಗಿದೆ. ಒಟ್ಟು 10.56 ಕೋಟಿ ಡೋಸ್‍ಗಳನ್ನು ಹಾಕಲಾಗಿದ್ದು, 4.98 ಕೋಟಿ ಮೊದಲ ಡೋಸ್ ಹಾಗೂ 4.80 ಕೋಟಿ ಎರಡನೆ ಡೋಸ್ ಲಸಿಕೆ ಹಾಕಲಾಗಿದೆ' ಎಂದು ಹೇಳಿದರು.
‘15Àರಿಂದ 17ವರ್ಷ ವಯೋಮಾನದವರಿಗೆ ಈವರೆಗೆ 50 ಲಕ್ಷ ಡೋಸ್‍ಗಳನ್ನು ಹಾಕಲಾಗಿದೆ. ಶೇ. 27ರಷ್ಟು ಜನಸಂಖ್ಯೆ ಮುಂಜಾಗ್ರತಾ ಲಸಿಕೆಯನ್ನು ಪಡೆದಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 61ಲಕ್ಷ ಲಸಿಕೆಗಳ ದಾಸ್ತಾನು ಲಭ್ಯವಿದೆ. ಸಾರ್ವಜನಿಕರಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲು ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳನ್ನು ತೀವ್ರಗೊಳಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ರಾಜ್ಯದ ಗಡಿಗಳಲ್ಲಿ ತಪಾಸಣೆಯನ್ನು ಹೆಚ್ಚಿಸಲಾಗುತ್ತಿದೆ. ಕೋವಿಡ್ ನಿರ್ವಹಣೆಗಾಗಿ ಒದಗಿಸಲಾಗಿರುವ 831 ಕೋಟಿ ರೂ.ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಎಲ್ಲ ಕಾಮಗಾರಿಗಳು ಪ್ರಗತಿಯಲ್ಲಿವೆ' ಎಂದು ಅವರು ಮಾಹಿತಿ ನೀಡಿದರು.
ಆರ್ಥಿಕ ಚಟುವಟಿಕೆಗಳಿಗೆ ನಿರ್ಬಂಧವಿಲ್ಲ:
‘1,220 ಮೆಟ್ರಿಕ್ ಟನ್ ಆಕ್ಸಿಜನ್ ದಾಸ್ತಾನು ರಾಜ್ಯದಲ್ಲಿ ಲಭ್ಯವಿದೆ. 243 ಆಕ್ಸಿಜನ್ ಘಟಕಗಳ ಪೈಕಿ 242 ಆಕ್ಸಿಜನ್ ಘಟಕಗಳ ಕಾಮಗಾರಿ ಪೂರ್ಣಗೊಂಡಿವೆ. ಆರ್ಥಿಕ ಚಟುವಟಿಕೆಗಳಿಗೆ ಯಾವುದೆ ನಿಬರ್ಂಧಗಳಿಲ್ಲದೆ, ಸಾಂಕ್ರಾಮಿಕವನ್ನು ನಿರ್ವಹಿಸಲು ಕ್ರಮ ವಹಿಸಲಾಗುವುದು. ಕೋವಿಡ್ ಸಂಭಾವ್ಯ ನಾಲ್ಕನೆ ಅಲೆಯನ್ನು ಎದುರಿಸಲು ರಾಜ್ಯ ಎಲ್ಲ ಸಿದ್ಧತೆ ಮಾಡಿಕೊಂಡಿದೆ'
-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ







