ಪಾಶ್ಚಿಮಾತ್ಯ ದೇಶಗಳು ಉಕ್ರೇನ್ ಗೆ ಒದಗಿಸಿದ್ದ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ನಾಶ: ರಶ್ಯ

ಮಾಸ್ಕೊ, ಎ.27: ಆಗ್ನೇಯ ಉಕ್ರೇನ್ ನಲ್ಲಿ ಸಂಗ್ರಹಿಸಿಟ್ಟಿದ್ದ ಪಾಶ್ಚಿಮಾತ್ಯ ದೇಶಗಳು ಪೂರೈಸಿದ್ದ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ದೀರ್ಘ ವ್ಯಾಪ್ತಿಯ ಕ್ಷಿಪಣಿ ಬಳಸಿ ಧ್ವಂಸಗೊಳಿಸಿರುವುದಾಗಿ ರಶ್ಯದ ರಕ್ಷಣಾ ಇಲಾಖೆ ಬುಧವಾರ ಹೇಳಿದೆ.
ಝಪೊರಿಝಿಯಾ ಅಲ್ಯುಮೀನಿಯಂ ಸ್ಥಾವರದ ಪ್ರದೇಶದಲ್ಲಿ , ಅಮೆರಿಕ ಮತ್ತು ಯುರೋಪ್ ದೇಶಗಳು ಉಕ್ರೇನ್ ಗೆ ಒದಗಿಸಿದ್ದ ಶಸ್ತ್ರಾಸ್ತ್ರಗಳ ಬೃಹತ್ ಸಂಗ್ರಹವನ್ನು ಅಧಿಕ ನಿಖರತೆಯ ದೀರ್ಘವ್ಯಾಪ್ತಿಯ ಕಲಿಬರ್ ಕ್ಷಿಪಣಿ ಪ್ರಯೋಗಿಸಿ ಧ್ವಂಸಗೊಳಿಸಲಾಗಿದೆ ಎಂದು ರಶ್ಯದ ರಕ್ಷಣಾ ಇಲಾಖೆಯ ಹೇಳಿಕೆ ತಿಳಿಸಿದೆ.
ಈ ಮಧ್ಯೆ, ರಶ್ಯ ಸೇನೆಯ ವಿರುದ್ಧ ಉಕ್ರೇನ್ ಗೆಲುವು ಸಾಧಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನ ನಡೆಸಬೇಕೆಂದು ಮಿತ್ರರಾಷ್ಟ್ರಗಳಿಗೆ ಕರೆ ನೀಡಿರುವ ಅಮೆರಿಕದ ನೇತೃತ್ವದಲ್ಲಿ 40 ದೇಶಗಳ ಪ್ರತಿನಿಧಿಗಳು ಜರ್ಮನಿಯಲ್ಲಿ ಸಭೆ ಸೇರಿ, ಉಕ್ರೇನ್ ಗೆ ಶಸ್ತ್ರಾಸ್ತ್ರ ಪೂರೈಕೆ ಹೆಚ್ಚಿಸುವ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಡೊನ್ಬಾಸ್ ಪ್ರಾಂತದಲ್ಲಿ ರಶ್ಯ ಸೇನೆಯ ಮುನ್ನಡೆಯನ್ನು ತಡೆಯಲು ಬೃಹತ್ ಶಸ್ತ್ರಾಸ್ತ್ರ ಪೂರೈಸುವಂತೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅಮೆರಿಕ ಮತ್ತು ಮಿತ್ರರಾಷ್ಟ್ರಗಳನ್ನು ಆಗ್ರಹಿಸಿದ್ದಾರೆ. ಆದರೆ, ಉಕ್ರೇನ್ನಲ್ಲಿನ ಯುದ್ಧ ನೇಟೊ ರಶ್ಯ ಯುದ್ಧವಾಗಿ ವಿಸ್ತರಣೆಯಾಗುವುದನ್ನು ತಪ್ಪಿಸಲು ಎಚ್ಚರಿಕೆಯ ಹೆಜ್ಜೆ ಇರಿಸಲು ಮಿತ್ರರಾಷ್ಟ್ರಗಳು ನಿರ್ಧರಿಸಿವೆ ಎಂದು ವರದಿಯಾಗಿದೆ.







