ದೇಶದ ಅತಿ ದೊಡ್ಡ ಐಪಿಒ ಮೇ 2ರಿಂದ ಆರಂಭ: ಎಲ್ಐಸಿಯ ಪ್ರತಿ ಶೇರಿಗೆ 902-949 ರೂ.ನಿಗದಿ

ಹೊಸದಿಲ್ಲಿ,ಎ.27: ಬಹು ನಿರೀಕ್ಷಿತ ಎಲ್ಐಸಿಯ ಶೇರುಗಳ ಆರಂಭಿಕ ಸಾರ್ವಜನಿಕ ನೀಡಿಕೆ (ಐಪಿಒ)ಯು ಮೇ 2ರಂದು ಸಾಂಸ್ಥಿಕ ಹೂಡಿಕೆದಾರರಿಗಾಗಿ ಮತ್ತು ಮೇ 4ರಿಂದ ಚಿಲ್ಲರೆ ಹೂಡಿಕೆದಾರರಿಗಾಗಿ ಆರಂಭವಾಗಲಿದೆ. ಐಪಿಒ ಮೇ 9ರಂದು ಅಂತ್ಯಗೊಳ್ಳಲಿದೆ ಎಂದು ಎಲ್ಐಸಿ ಅಧ್ಯಕ್ಷ ಎಂ.ಆರ್.ಕುಮಾರ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
902 ರೂ.ರಿಂದ 949 ರೂ.ಗಳ ದರವನ್ನು ಐಪಿಒಗೆ ನಿಗದಿಗೊಳಿಸಲಾಗಿದೆ. ಎಲ್ಐಸಿ ಪಾಲಿಸಿಗಳನ್ನು ಹೊಂದಿದವರಿಗೆ ಪ್ರತಿ ಶೇರಿಗೆ 60 ರೂ. ಮತ್ತು ಚಿಲ್ಲರೆ ಹೂಡಿಕೆದಾರರು ಹಾಗೂ ಉದ್ಯೋಗಿಗಳಿಗೆ 45 ರೂ.ರಿಯಾಯಿತಿ ಲಭಿಸಲಿದೆ ಎಂದರು.ಭಾರತದ ಅತ್ಯಂತ ದೊಡ್ಡ ಜೀವವಿಮಾಸಂಸ್ಥೆಯಾಗಿರುವ ಎಲ್ಐಸಿಯ ಶೇರುಗಳು ಮೇ 17ರಿಂದ ಶೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಿಗೆ ಲಭ್ಯವಾಗುವ ನಿರೀಕ್ಷೆಯಿದೆ.
ಎಲ್ಐಸಿಯ ಲಿಸ್ಟಿಂಗ್ ಸರಕಾರದ ದೀರ್ಘಾವಧಿಯ ವ್ಯೆಹಾತ್ಮಕ ದೂರದೃಷ್ಟಿಯ ಭಾಗವಾಗಿದೆ ಮತ್ತು ದೀರ್ಘಾವಧಿಯಲ್ಲಿ ಸಂಸ್ಥೆಯ ವೌಲ್ಯವನ್ನು ಹೆಚ್ಚಿನ ಎತ್ತರಕ್ಕೆ ಒಯ್ಯಲಿದೆ ಎಂದು ತಿಳಿಸಿದ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಅವರು,ಬಂಡವಾಳ ಮಾರುಕಟ್ಟೆಯ ವಾತಾವರಣವನ್ನು ಪರಿಗಣಿಸಿದರೆ ಎಲ್ಐಸಿ ಐಪಿಒ ಸರಿಯಾದ ಗಾತ್ರದಲ್ಲಿದೆ ಎಂದರು.
ಐಪಿಒದ ಗಾತ್ರವನ್ನು ಸುಮಾರು 20,557 ಕೋ.ರೂ.ಗೆ ಕಡಿತಗೊಳಿಸಿದ ಬಳಿಕವೂ ಅದು ದೇಶದಲ್ಲಿಯ ಈವರೆಗಿನ ಅತ್ಯಂತ ದೊಡ್ಡ ಐಪಿಒ ಆಗಿರಲಿದೆ ಎಂದೂ ಪಾಂಡೆ ಹೇಳಿದರು.
ಉದ್ಯೋಗಿಗಳ ಮೀಸಲಾತಿ ಭಾಗವು ಐಪಿಒ ನಂತರದ ಈಕ್ವಿಟಿ ಶೇರು ಬಂಡವಾಳದ ಶೇ.5 ಮತ್ತು ಪಾಲಿಸಿದಾರರಿಗೆ ಮೀಸಲಾತಿಯು ಐಪಿಒ ಗಾತ್ರದ ಶೇ.10 ಆಗಿರಲಿದೆ.ಐಪಿಒ ನೀಡಿಕೆ ಗಾತ್ರವನ್ನು ಶೇ.5ರಿಂದ ಶೇ.3.5ಕ್ಕೆ ತಗ್ಗಿಸಲು ಎಲ್ಐಸಿ ಮಂಡಳಿಯು ಅನುಮೋದನೆ ನೀಡಿದೆ ಎಂದು ಕಂಪನಿಯು ತಿಳಿಸಿದೆ.
21,000 ಕೋ.ರೂ.ಗಳ ಆಫರ್ ಫಾರ್ ಸೇಲ್ ಮೂಲಕ ಎಲ್ಐಸಿಯಲ್ಲಿನ ತನ್ನ ಪಾಲು ಬಂಡವಾಳದ ಶೇ.3.5ರಷ್ಟನ್ನು ಹಿಂದೆಗೆದುಕೊಳ್ಳಲು ಸರಕಾರವು ಉದ್ದೇಶಿಸಿದೆ.







