ಅಮೆರಿಕದ ಬೌದ್ಧಿಕ ಆಸ್ತಿ ಹಕ್ಕು ಕಪ್ಪು ಪಟ್ಟಿಯಲ್ಲಿ ಭಾರತ, ಚೀನಾ, ರಷ್ಯಾ!

ವಾಷಿಂಗ್ಟನ್: ಅಮೆರಿಕ ತನ್ನ ವಾರ್ಷಿಕ ಬೌದ್ಧಿಕ ಆಸ್ತಿ ಹಕ್ಕುಗಳ ಕಪ್ಪು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಚೀನಾ, ರಷ್ಯಾ ಮತ್ತು ಭಾರತ ಸೇರಿದಂತೆ ಏಳು ದೇಶಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ.
ಈ ದೇಶಗಳಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಜಾರಿ ವ್ಯವಸ್ಥೆ ಸಡಿಲವಾಗಿರುವುದರಿಂದ ಅಮೆರಿಕನ್ ಕಂಪನಿಗಳು ಕಾಪಿರೈಟ್ ಮತ್ತು ಟ್ರೇಡ್‍ಮಾರ್ಕ್ ಕಳ್ಳತನಕ್ಕೆ ಒಳಗಾಗುವ ಅಪಾಯವಿದೆ ಎಂದು ಎಚ್ಚರಿಸಲಾಗಿದೆ.
ಕಳೆದ ವರ್ಷ ಪಟ್ಟಿಯಲ್ಲಿದ್ದ ಏಳು ದೇಶಗಳನ್ನೇ ಈ ವರ್ಷವೂ ಪಟ್ಟಿಯಲ್ಲಿ ಸೇರಿಸಲಾಗಿದೆ. "ಚೀನಾ ನಕಲಿ ಮತ್ತು ಕಳವು ಮಾಲುಗಳ ಅತಿದೊಡ್ಡ ಮೂಲ ಆರ್ಥಿಕತೆಯಾಗಿ ಮುಂದುವರಿದಿದೆ" ಎಂದು ವರದಿಯಲ್ಲಿ ವಿವರಿಸಲಾಗಿದೆ.
ಅಮೆರಿಕದ ವ್ಯಾಪಾರ ಪ್ರತಿನಿಧಿಗಳ ಕಚೇರಿಯ ಆದ್ಯತೆಯ ಕಣ್ಗಾವಲು ಪಟ್ಟಿಯಲ್ಲಿ ಇರುವ ಇತರ ದೇಶಗಳೆಂದರೆ ಅರ್ಜೆಂಟೀನಾ, ಚಿಲಿ, ಇಂಡೋನೇಷ್ಯಾ ಮತ್ತು ವೆನೆಝುವೆಲಾ. ಅಮೆರಿಕ ಪ್ರಸ್ತುತ ವರ್ಷಕ್ಕೆ ಯುದ್ಧಪೀಡಿತ ಉಕ್ರೇನ್‍ನ ಪರಾಮರ್ಶೆಯನ್ನು ರದ್ದುಪಡಿಸಿದೆ.
ಕಳೆದ ವರ್ಷದ ಕಪ್ಪುಪಟ್ಟಿಯಲ್ಲಿ ಉಕ್ರೇನ್ ಸೇರಿತ್ತು. ವ್ಯಾಪಾರ ಕಚೇರಿ, ಸೌದಿ ಅರೇಬಿಯಾವನ್ನು ಆದ್ಯತೆಯ ಕಣ್ಗಾವಲು ಪಟ್ಟಿಯಿಂದ ಕಿತ್ತುಹಾಕಿದೆ. ನಕಲಿ ಮತ್ತು ಕಳ್ಳಮಾಲು ತಡೆಗೆ ಕ್ರಮಗಳನ್ನು ಕೈಗೊಳ್ಳುತ್ತಿರುವ ಮತ್ತು ವಿಶೇಷ ಬೌದ್ಧಿಕ ಆಸ್ತಿ ಜಾರಿ ನ್ಯಾಯಾಲಯಗಳ ಸ್ಥಾಪನೆಯ ಕಾರಣ ನೀಡಿ ಪಟ್ಟಿಯಿಂದ ಕಿತ್ತುಹಾಕಲಾಗಿದೆ.
ಬುಧವಾರ ಬಿಡುಗಡೆಯಾದ ಈ ಪಟ್ಟಿಯನ್ನು ಸಿದ್ಧಪಡಿಸಲು ಅಮೆರಿಕದ ಟ್ರೇಡ್ ಆಫೀಸ್, ಅಮೆರಿಕದ 100ಕ್ಕೂ ಹೆಚ್ಚು ವ್ಯಾಪಾರ ಪಾಲುದಾರ ದೇಶಗಳ ಸಾಧನೆಯನ್ನು ಪರಾಮರ್ಶಿಸಿದೆ.







