ಗಂಟೆಗೆ 153 ಕಿ.ಮೀ. ವೇಗದ ಯಾರ್ಕರ್ ಮೂಲಕ ವೃದ್ಧಿಮಾನ್ ಸಹಾರನ್ನು ಕ್ಲೀನ್ ಬೌಲ್ಡ್ ಮಾಡಿದ ಉಮ್ರಾನ್ ಮಲಿಕ್!

Photo:twitter,
ಮುಂಬೈ: ಈಗ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಜಮ್ಮು ಮೂಲದ ಯುವ ವೇಗದ ಬೌಲರ್ ಉಮ್ರಾನ್ ಮಲಿಕ್ ಈ ಋತುವಿನಲ್ಲಿ ತನ್ನ ಸ್ಥಿರ ಹಾಗೂ ನಿಖರವಾದ ವೇಗದ ಬೌಲಿಂಗ್ನಿಂದ ಖಂಡಿತವಾಗಿಯೂ ವಿಶ್ವದ ಗಮನ ಸೆಳೆದಿದ್ದಾರೆ.
ಐಪಿಎಲ್ 2022 ರಲ್ಲಿ ಅದ್ಭುತ ಆರಂಭವನ್ನು ಪಡೆದ ನಂತರ ವಿಶ್ರಾಂತಿ ಪಡೆಯದ ಉಮ್ರಾನ್ ಬುಧವಾರ ಗುಜರಾತ್ ಟೈಟಾನ್ಸ್ ವಿರುದ್ಧ ಐದು ವಿಕೆಟ್ ಗೊಂಚಲು ಪಡೆದು ಜೀವನಶ್ರೇಷ್ಠ ಸಾಧನೆ ಮಾಡಿದರು. ಗಂಟೆಗೆ 152.8 ಕಿ.ಮೀ. ವೇಗದ ಯಾರ್ಕರ್ ಎಸೆತದ ಮೂಲಕ ಕ್ರೀಸ್ ಗೆ ಅಂಟಿಕೊಂಡಿದ್ದ ವೃದ್ಧಿಮಾನ್ ಸಹಾ(68 ರನ್) ಅವರ ಸ್ಟಂಪ್ಗಳನ್ನು ಉಡಾಯಿಸಿದ್ದು ಅವರ ಐದು ವಿಕೆಟ್ಗಳ ಸಾಧನೆಯ ಪ್ರಮುಖ ಅಂಶವಾಗಿದೆ.
ಮಲಿಕ್ ಮಾರಕ ಬೌಲಿಂಗ್ ಹೊರತಾಗಿಯೂ ಹೈದರಾಬಾದ್ ಪಂದ್ಯದ ಕೊನೆಯ ಎಸೆತದಲ್ಲಿ ಪಂದ್ಯವನ್ನು 5 ವಿಕೆಟ್ ನಿಂದ ಸೋತಿತು. 4 ಓವರ್ ಗಳಲ್ಲಿ 25 ರನ್ ನೀಡಿ 5 ವಿಕೆಟ್ ಗಳನ್ನು ಪಡೆದ ಉಮ್ರಾನ್ ಹೈದರಾಬಾದ್ ತಂಡವನ್ನು ಗೆಲುವಿನ ಹೊಸ್ತಿಲಲ್ಲಿ ತಂದು ನಿಲ್ಲಿಸಿದ್ದರು.
ತನ್ನ ಮಾರಕ ಸ್ಪೆಲ್ ಮೂಲಕ ಸಹಾ, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್ ಹಾಗೂ ಅಭಿನವ್ ಮನೋಹರ್ ಅವರ ವಿಕೆಟ್ ಗಳನ್ನು ಉರುಳಿಸಿದರು.
ವೇಗದ ಬೌಲಿಂಗ್ನ ಈ ಅದ್ಭುತ ಪ್ರದರ್ಶನದ ಮೂಲಕ ಉಮ್ರಾನ್ ಈ ವರ್ಷದ ಐಪಿಎಲ್ ನಲ್ಲಿ ಒಟ್ಟು 15 ವಿಕೆಟ್ಗಳೊಂದಿಗೆ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ತನ್ನ ಸಹ ಆಟಗಾರ ಟಿ. ನಟರಾಜನ್ ರೊಂದಿಗೆ ಜಂಟಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಐಪಿಎಲ್ 2022 ರಲ್ಲಿಮಲಿಕ್ ಹಾಗೂ ನಟರಾಜನ್ ತಲಾ 8 ಪಂದ್ಯಗಳಲ್ಲಿ ಒಟ್ಟು 15 ವಿಕೆಟ್ ಗಳನ್ನು ಕಬಳಿಸಿದ್ದಾರೆ.
ರಾಜಸ್ಥಾನದ ಬೌಲರ್ ಯಜುವೇಂದ್ರ ಚಹಾಲ್ 8 ಪಂದ್ಯಗಳಲ್ಲಿ 18 ವಿಕೆಟ್ಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
Umran Malik with a casual 153 km/h yorker to send Wriddhiman Saha packing. Unreal. #GTvsSRH pic.twitter.com/dDhRGeO8mc
— Mike Stopforth (@mikestopforth) April 27, 2022







