ಮಸೀದಿ ಮಂದಿರಗಳ ವಾಸ್ತುಶಿಲ್ಪ ಅನಾದಿ ಕಾಲದ ಸಮರಸದ ಭಾವಶಿಲ್ಪ

ನೀನು ಜಗತ್ತನ್ನು ನೋಡಬೇಕೆಂಬ ಹಂಬಲವುಳ್ಳವನಾದರೆ ಮೊದಲು ಭಾರತವನ್ನು ಒಮ್ಮೆ ಸುತ್ತಾಡಿ ನೋಡು ಎಂಬ ಹಿರಿಯರ ಮಾತು ಅಕ್ಷರಶಃ ಸತ್ಯ. ಭಾರತದಲ್ಲಿ ಏನುಂಟು? ಏನಿಲ್ಲ?. ಇಲ್ಲಿನ ನೆಲ, ಜಲ, ಪರ್ವತ, ಕಣಿವೆ, ಮರ, ಮಣ್ಣು, ವಾತಾವರಣಾದಿಯಾಗಿ ಎಲ್ಲವೂ ವಿಶಿಷ್ಟ, ವಿಭಿನ್ನ ಮತ್ತು ವೈವಿಧ್ಯಮಯವಾದುದು.
ಪ್ರಾಚೀನ ಕಾಲದಿಂದಲೂ ಭಾರತೀಯರು ಎಲ್ಲರನ್ನೂ ಒಳಗೊಂಡ ಮತ್ತು ಎಲ್ಲವನ್ನೂ ಒಳಗೊಂಡ ಸಂಯುಕ್ತ, ಸಮ್ಮಿಶ್ರ ಸಂಸ್ಕೃತಿಗಳ ಅನುಪಾಲಕರಾಗಿ ಬದುಕುತ್ತಾ ಬಂದವರು. ಈ ಸಮ್ಮಿಶ್ರ ಸಂಸ್ಕೃತಿಯ ಪರಂಪರೆ, ಕಟ್ಟುಪಾಡುಗಳನ್ನು ಹೊಸಪೀಳಿಗೆಯ ಜನರು ವಾಹಕರಾಗಿ ಮುಂದಿನ ತಲೆಮಾರಿಗೆ ಬದ್ಧತೆಯಿಂದ ಹಸ್ತಾಂತರಿಸುತ್ತಾ ಬಂದವರು. ಇದುವೇ ಭಾರತದ ವೈವಿಧ್ಯಮಯ ಸಂಸ್ಕೃತಿಯ ಭೂಷಣ. ಧಾರ್ಮಿಕ ಆಚರಣೆಗಳು, ನೆಲಜಲ ಸಂಬಂಧಿಸಿದ ಕಟ್ಟುಪಾಡುಗಳು, ಕೃಷಿ ಬೆಳೆ ಮೂಲದ ನಂಬಿಕೆಗಳನ್ನು ಭಾರತೀಯರಲ್ಲಿ ಜಗತ್ತಿನ ಇತರ ದೇಶಗಳಿಗಿಂತ ಹೆಚ್ಚಾಗಿ ಕಾಣಬಹುದು. ವಿಶಾಲವಾದ ಭಾರತದ ಮಣ್ಣಿನಲ್ಲಿ ಅನಾದಿಕಾಲದಿಂದಲೂ ಕೊಡುಕೊಳ್ಳುವಿಕೆ ಪಾರಂಪರಿಕವಾಗಿ ನಡೆದುಕೊಂಡು ಬಂದಿದೆ. ಜಗತ್ತಿನ ಎಲ್ಲಾ ಧರ್ಮ ಮತ್ತು ನಂಬಿಕೆಗಳ ಜನರನ್ನು ತನ್ನ ಒಡಲಲ್ಲಿ ಇಟ್ಟು ಪೋಷಿಸುತ್ತಾ ಬಂದ ಭಾರತಕ್ಕೆ ಬಹು ಸಂಸ್ಕೃತಿ ಒಂದು ಶಕ್ತಿಯೂ ಮತ್ತು ಯುಕ್ತಿಯೂ ಆಗಿದೆ.
ನೂರಾರು ವರ್ಷಗಳ ಹಿಂದಿನ ಈ ಕೊಡುಕೊಳ್ಳುವಿಕೆಯ ಪರಂಪರೆಯನ್ನು ಇಲ್ಲಿನ ಮಳೆ- ಬೆಳೆಯ ಕಾಲದಲ್ಲಿ, ನೋವು-ನಲಿವಿನ ಸಮಯದಲ್ಲಿ ಉತ್ಸವ-ಉರೂಸಿನ ಕಾಲದಲ್ಲಿ, ಹುಟ್ಟು-ಸಾವಿನ ಸಮಯದಲ್ಲಿ ಮೂರ್ತ ರೂಪದಲ್ಲಿ ಕಾಣಬಹುದಿತ್ತು. ಇಂತಹ ಅನೇಕಾನೇಕ ಸಂಪ್ರದಾಯಗಳು ಆಧುನಿಕ ಕಾಲದಲ್ಲಿ ಪ್ರಶ್ನೆಗೆ ಒಳಪಟ್ಟಾಗ ಅದಕ್ಕೆ ಸಾಕ್ಷಿಯಾಗಿದ್ದದ್ದು ಮೌಖಿಕ ಸಾಹಿತ್ಯ, ಜನಪದೀಯ ಪದ್ಯ-ಗದ್ಯಗಳು, ಸ್ಥಳ ಮಹಿಮೆಗಳು, ಲಾವಣಿಗಳು, ತತ್ವಪದಗಳು, ಸೂಫೀ ಸಂತರ ಜೀವನಗಾಥೆಗಳು, ಅವರ ಹೆಸರಿನಲ್ಲಿ ಆಚರಿಸಲ್ಪಡುತ್ತಾ ಬಂದಿರುವ ಉತ್ಸವ ಉರೂಸ್‌ಗಳು, ಸಂಧಿ ಪಾಡ್ದನಗಳು ಇತ್ಯಾದಿ.ಕಾಲಗರ್ಭದ ಸುಳಿಯಲ್ಲಿ ಜನರು ಹಿಂದಿನದ್ದೆಲ್ಲಾ ಮರೆತು ಹೊಸ ಆಲೋಚನೆ- ಚಿಂತನೆಗಳೊಂದಿಗೆ ಹೊಸ ಭಾವನೆಗಳ ಲಹರಿಯನ್ನು ಸುತ್ತಮುತ್ತ ಪಸರಿಸಲು ಪ್ರಯತ್ನ ಪಡುತ್ತಿರುವ ಈಗಿನ ಕಾಲದಲ್ಲಿ ಹಿಂದಿನ ಪಾರಂಪರಿಕ ಕಾಲದ ಬೆರೆಯುವಿಕೆಗೆ, ಪರಸ್ಪರ ಅರಿಯುವಿಕೆಗೆ ಮತ್ತು ಅಂದಿನ ಕೊಡುಕೊಳ್ಳುವಿಕೆಗೆ ಎಲ್ಲಿದೆ ಸಾಕ್ಷಿ ಎಂದಾಗ ನಮಗೆ ಲಭಿಸುವುದು ಇಂದು ಕೂಡಾ ನಮ್ಮ ಕಣ್ಣ ಮುಂದೆ ಕಾಣುತ್ತಿರುವ ಗತಕಾಲದ ಸ್ಮಾರಕಗಳು, ಕೋಟೆ ಕೊತ್ತಲಗಳು, ಮಸೀದಿ ಮಂದಿರಗಳು ಇತ್ಯಾದಿ.
ಭಾರತವನ್ನು ಸಾಂಸ್ಕೃತಿಕವಾಗಿ ಜಗತ್ತಿನಲ್ಲೇ ಎತ್ತರಕ್ಕೆ ಏರಿಸಿರುವುದು ಇಲ್ಲಿನ ಐತಿಹಾಸಿಕ ಸ್ಮಾರಕ, ಮಂದಿರ, ಮಸೀದಿಗಳು. ಇಂದಿಗೂ ವಿದೇಶಗಳ ಸಾಮಾನ್ಯ ಪ್ರವಾಸಿಗಳಾಗಲಿ ಅಥವಾ ಗಣ್ಯ ಅತಿಥಿಗಳಾಗಲಿ ಭಾರತದಲ್ಲಿ ಆನಂದಿಸುವುದು, ಕೊಂಡಾಡುವುದು ಇಲ್ಲಿನ ಸಮ್ಮಿಶ್ರ ಸಂಸ್ಕೃತಿಯ ಗೋಚರ ಹೆಗ್ಗುರುತುಗಳನ್ನು ಕಂಡು. ಆಗ್ರಾ ಆಗಲಿ, ಮಹಾಬಲಿಪುರಂ ಆಗಲಿ, ಮಧುರೈ, ಪುರಿ, ಹಂಪಿಯಾಗಲಿ, ವಿಜಯಪುರ, ಹೈದರಬಾದ್, ದಿಲ್ಲಿಯಾಗಲಿ ಇಲ್ಲೆಲ್ಲಾ ಸಾಕ್ಷಿಯಾಗಿರುವುದು ಸಮ್ಮಿಶ್ರ ಸಂಸ್ಕೃತಿಗಳ ಶ್ರೇಷ್ಠ ನಿರ್ಮಾಣಗಳಾಗಿವೆ.
ಸಾಮಾನ್ಯವಾಗಿ ಜನರು ಯಾವುದೇ ಐತಿಹಾಸಿಕ ನಿರ್ಮಾಣಗಳನ್ನು ಅವುಗಳ ಬಾಹ್ಯರಚನೆಯ ಮೂಲಕ ಆಸ್ವಾದಿಸುತ್ತಾರೆ. ಇನ್ನೂ ಸ್ವಲ್ಪ ಮುಂದುವರಿದ ಆಲೋಚನೆಯುಳ್ಳವರು ಅವುಗಳ ಗತ ವೈಭವವನ್ನು ಅರಿಯುವ ಪ್ರಯತ್ನ ಮಾಡುತ್ತಾರೆ. ಆದರೆ ಆ ಐತಿಹಾಸಿಕ ನಿರ್ಮಾಣಗಳ ವಾಸ್ತುಶಿಲ್ಪ ಶೈಲಿ, ಅಂದಿನ ರಚನಾ ಕಾಲ, ಆಗಿನ ವಾಸ್ತವಿಕ ಪರಿಸ್ಥಿತಿ, ಜನಜೀವನವನ್ನು ಗ್ರಹಿಸಿಕೊಂಡು ಒಂದು ಮಸೀದಿ, ಮಂದಿರ, ಕೋಟೆ ಅಥವಾ ಅರಮನೆಗಳನ್ನು ಐತಿಹಾಸಿಕ ಪ್ರಜ್ಞೆಯೊಂದಿಗೆ ಆಸ್ವಾದಿಸುವ ಜನರು ಇಂದು ಎಷ್ಟಿದ್ದಾರೆ?
ಐತಿಹಾಸಿಕ ನಿರ್ಮಾಣಗಳ ಮೇಲುಸ್ತುವಾರಿಯನ್ನು ಹೊಂದಿರುವ ಜನರಾದಿಯಾಗಿ ಜನಸಾಮಾನ್ಯರು ಹಾಗೂ ವಿದ್ಯಾವಂತರೆನಿಸಿಕೊಂಡವರೆಲ್ಲರೂ ಇತಿಹಾಸವನ್ನು ಮರೆತರೆ ನಮ್ಮಿಂದ ಇತಿಹಾಸವನ್ನು ನಿರ್ಮಿಸಲು ಬಿಡಿ ಉಳಿಸಿಕೊಳ್ಳಲೂ ಸಾಧ್ಯವಿಲ್ಲ. ಇದನ್ನು ತನ್ನ ದೂರದೃಷ್ಟಿಯಿಂದ ಅಂದೇ ಅರಿತಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ನಮ್ಮೆಲ್ಲರನ್ನೂ ಉದ್ದೇಶಿಸಿ ‘ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು’ ಎಂದು ಮಾರ್ಮಿಕವಾಗಿ ನುಡಿದಿದ್ದರು.
ಭಾರತದ ಐತಿಹಾಸಿಕ ಮಂದಿರ ಮಸೀದಿಗಳು ಶತಮಾನಗಳ ಕಾಲ ಕಣ್ಮನ ಸೆಳೆಯಬೇಕೆಂಬ ಉದ್ದೇಶದಿಂದ ನಿರ್ಮಾಣವಾದುದಲ್ಲ ಬದಲಾಗಿ ಅವುಗಳ ವಾಸ್ತುಶಿಲ್ಪ ರಚನೆಯಿಂದಾಗಿ ಸಾವಿರಾರು ವರ್ಷಗಳ ನಂತರವೂ ನಮ್ಮ ಮುಂದೆ ಮತ್ತೆ ಮತ್ತೆ ನೋಡಬೇಕೆಂಬ ಅಪೇಕ್ಷೆಯನ್ನು ಸೃಷ್ಟಿಸುತ್ತಲೇ ಇವೆ.
ಭಾರತದಲ್ಲಿ ಪ್ರಧಾನವಾಗಿ ಮೂರು ರೀತಿಯ ವಾಸ್ತುಶಿಲ್ಪ ಶೈಲಿಯನ್ನು ಕಾಣಬಹುದು. ದಕ್ಷಿಣ ಭಾರತದಲ್ಲಿ ದ್ರಾವಿಡ ಶೈಲಿ, ಉತ್ತರ ಭಾರತದಲ್ಲಿ ನಾಗರ ಶೈಲಿ ಹಾಗೂ ಮಧ್ಯಭಾರತದಲ್ಲಿ (ದಖನ್ ಪ್ರಸ್ಥಭೂಮಿ) ವೇಸರ ಶೈಲಿಯ ವಾಸ್ತುಶಿಲ್ಪಗಳು ಐತಿಹಾಸಿಕ ಸ್ಮಾರಕಗಳಾಗಿ ನಿಂತಿವೆ. ಈ ಮೂರು ವಾಸ್ತು ಶೈಲಿಗಳಿಗೆ ಅದರದ್ದೇ ಆದ ಲಕ್ಷಣಗಳಿವೆ.
ನಾಗರ ಶೈಲಿ
ನಾಗರ ಶೈಲಿಯ ದೇವಾಲಯಗಳು ಎತ್ತರದ ಏಕೈಕ ಶಿಖರವನ್ನು ಒಳಗೊಂಡಿರುವ ಲಕ್ಷಣವನ್ನು ಹೊಂದಿದೆ.ಕಟ್ಟಡದ ಬುಡದಿಂದ ಶಿಖಾರಾಗ್ರದವರೆಗೂ ಚಚ್ಚೌಕ ಅಥವಾ ಆಯತಾಕಾರವಾಗಿರುವ , ಗರ್ಭಗುಡಿಯ ಬಾಗಿಲುವಾಡಗಳು ಹೆಚ್ಚು ಆಲಂಕಾರಿಕವಾಗಿರುವ ಲಕ್ಷಣಗಳನ್ನು ನಾಗರ ಶೈಲಿಯಲ್ಲಿ ಕಾಣಬಹುದು.
ವೇಸರ ಶೈಲಿ
ಮಧ್ಯಭಾರತ, ವಿಂದ್ಯಸಾತ್ಪುರಾ ಪರ್ವತ ಶ್ರೇಣಿಗಳ ಆಸುಪಾಸಿನ ಪ್ರದೇಶಗಳಲ್ಲಿ ದ್ರಾವಿಡ ಮತ್ತು ನಾಗರ ಶೈಲಿಗಳ ಸಂಯೋಜಿತ ಶೈಲಿಯ ದೇವಾಲಯಗಳನ್ನು ಕಾಣಬಹುದು. ಈ ಶೈಲಿಯನ್ನು ವೇಸರ ಶೈಲಿ ಎಂದು ಕರೆಯಲಾಗಿದೆ. ಗರ್ಭಗುಡಿಯ ಮೇಲಿನ ರಚನೆ ಪಿರಮಿಡ್ ಆಕೃತಿಯಲ್ಲಿದ್ದು ಉತ್ತರದ ಶಿಖರವು ಗಿಡ್ಡವಾಗಿರುತ್ತದೆ. ಗೋಡೆಗಳು ಶಂಖುವಿನಾಕಾರದಲ್ಲಿರುತ್ತದೆ. ದ್ರಾವಿಡ ಮತ್ತು ನಾಗರ ಶೈಲಿಗಳ ಹಿತಮಿತವಾದ ಮಿಶ್ರಣವನ್ನು ವೇಸರ ಶೈಲಿಯಲ್ಲಿ ಕಾಣಬಹುದು.
ದ್ರಾವಿಡ ಶೈಲಿ
ಇನ್ನು ಮೂರನೇ ಪ್ರಕಾರವಾದ ದ್ರಾವಿಡ ಶೈಲಿಯ ರಚನೆಗಳಲ್ಲಿ ದೇವಾಲಯಗಳ ವಿಮಾನಭಾಗದಿಂದ ಶಿಖಾರಾಗ್ರಹದವರೆಗೂ ಕೋನ ಮತ್ತು ಮುಖಗಳುಳ್ಳ ರಚನೆಗಳು ಇವೆ. ಶಿಖರದಿಂದ ಮೇಲಕ್ಕೆ ಕ್ರಮೇಣ ಕಿರಿದಾಗುತ್ತಾ ಬರುವ ಅಂತಸ್ತುಗಳಿರುತ್ತವೆ. ದೇವಾಲಯಗಳು ಆಯತಾಕಾರ ಅಥವಾ ಚೌಕಾಕಾರದಲ್ಲಿಯೂ ಇರಬಹುದು. ದೇವಾಲಯದ ಸುತ್ತಲೂ ವಿಶಾಲವಾದ ಮಂಟಪ, ಮೊಗಸಾಲೆಗಳಿರುವುದು ದ್ರಾವಿಡಶೈಲಿಯ ಲಕ್ಷಣಗಳಾಗಿವೆ. ಬೆಳಕಿಗಾಗಿ ಕಿಟಕಿಗಳು, ಜಾಲಂದ್ರಗಳು ಇರುತ್ತವೆ.
ಗುಪ್ತರ ಕಾಲದಲ್ಲಿ ಆರಂಭವಾದ ಈ ಶೈಲಿಯ ನಿರ್ಮಾಣಗಳು ನಂತರದ ಬಹುತೇಕ ರಾಜವಂಶಗಳ ಕಾಲದಲ್ಲಿ ಮುಂದುವರಿದಿವೆ ಮಾತ್ರವಲ್ಲದೆ ಕಾಲಕ್ರಮೇಣ ಸ್ಥಳೀಯವಾದ ಅಂಶಗಳನ್ನು ಒಳಗೊಂಡು ಸಂರಚನೆಗೆ ಒಳಗಾಗಿರುವುದನ್ನು ವ್ಯಾಪಕವಾಗಿ ಕಾಣಬಹುದು.
ದ್ರಾವಿಡ ಶೈಲಿಯ ಮಸೀದಿಗಳು
ಭಾರತದಲ್ಲಿನ ಪುರಾತನ ಮಸೀದಿಗಳು ಮೊದಲಿಗೆ ಕೇರಳದಲ್ಲಿ ನಿರ್ಮಾಣವಾದವುಗಳಾಗಿವೆ.
ಅರೇಬಿಯ ಪ್ರದೇಶದಿಂದ ಭಾರತಕ್ಕೆ ಬಂದ ಪ್ರವಾದಿ ಮುಹಮ್ಮದ್ (ಸ.ಅ.) ಅವರ ಅನುಯಾಯಿಗಳು ಕೇರಳ ಮೂಲಕ ಭಾರತವನ್ನು ಪ್ರವೇಶಿಸಿದರು. ಕ್ರಿಸ್ತ ಶಕ ಏಳನೇ ಶತಮಾನದಲ್ಲಿ ದಕ್ಷಿಣ ಭಾರತದ ಕೇರಳದಲ್ಲಿ ಪ್ರಥಮವಾಗಿ ಮಸೀದಿಯನ್ನು ನಿರ್ಮಿಸಲಾಯಿತು. ದಕ್ಷಿಣ ಕೇರಳದಿಂದ ಉತ್ತರ ದಿಕ್ಕಿಗೆ ಬಂದ ಅಂದಿನ ಕಾಲದ ಇಸ್ಲಾಮಿ ಸಂತರು ಆಯ್ದ ಕಡೆ ಮಸೀದಿಗಳನ್ನು ಸ್ಥಾಪಿಸುತ್ತಾ ಬಂದರು. ಗಡಿನಾಡು ಕರ್ನಾಟಕದ ಕಾಸರಗೋಡಿನ ತಳಂಗೆರೆ ಎಂಬಲ್ಲಿ ಸ್ಥಾಪಿಸಲ್ಪಟ್ಟ ಮಸೀದಿ, ಮಂಗಳೂರಿನ ಐತಿಹಾಸಿಕ ಜುಮಾ ಮಸೀದಿ ಹಾಗೂ ಬಾರ್ಕೂರಿನ ಮಸೀದಿಗಳು ಇದೇ ಕಾಲದಲ್ಲಿ ನಿರ್ಮಾಣವಾದವುಗಳಾಗಿವೆ. ಕೇರಳದ ಕೊಡಂಗಲ್ಲೂರು ಸೇರಿದಂತೆ ಕಾಸರಗೋಡು, ಮಂಗಳೂರು ಹಾಗೂ ಬಾರ್ಕೂರಿನ ( ಸುಮಾರು ಒಂಭತ್ತು ಮಸೀದಿಗಳು )ಈ ಎಲ್ಲಾ ಐತಿಹಾಸಿಕ ಮಸೀದಿಗಳು ಭಾರತದಲ್ಲಿ ಏಳನೇ ಶತಮಾನದಲ್ಲಿ ನಿರ್ಮಾಣವಾಗಿವೆ. ಇವೇ ಈ ದೇಶದ ಅತ್ಯಂತ ಹಳೆಯ ಮಸೀದಿಗಳು. ಇವು ಅಂದಿನ ಕಾಲದಲ್ಲಿ ಆಯಾಯಕಾಲದ ವಾಸ್ತವಿಕ ಲಭ್ಯತೆಗೆ ಅನುಗುಣವಾಗಿ ನಿರ್ಮಾಣವಾದವು ಆದರೆ ಕ್ರಮೇಣ ಪುನರ್ನಿರ್ಮಾಣವಾಗುವಾಗ ದಕ್ಷಿಣ ಭಾರತದಲ್ಲಿ ಪ್ರಚಲಿತದಲ್ಲಿದ್ದ ದ್ರಾವಿಡ ಶೈಲಿಯಲ್ಲಿಯೇ ನಿರ್ಮಾಣವಾಯಿತು.
ಅದರಲ್ಲೂ ಕೇರಳದಲ್ಲಿ ದ್ರಾವಿಡ ಶೈಲಿಯು ಅಲ್ಲಿನ ಸ್ವಂತಿಕೆಗೆ ಅನುಗುಣವಾಗಿ ಭಿನ್ನವಾದ ವಾಸ್ತುಶೈಲಿಗೆ ರೂಪಾಂತರಗೊಂಡಿತು. ಕೇರಳ ಮತ್ತು ಕೇರಳದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡು ಹಾಗೂ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ದೇವಾಲಯಗಳು ಮತ್ತು ಮಸೀದಿಗಳು ಕೇರಳ ಪ್ರಭಾವದ ದ್ರಾವಿಡ ವಾಸ್ತುಶೈಲಿ ಮಾದರಿಯನ್ನು ಅನುಸರಿಸಿಕೊಂಡು ನಿರ್ಮಾಣವಾಯಿತು.
ಕೇರಳಕ್ಕೂ ಕರ್ನಾಟಕದ ಕರಾವಳಿ ಪ್ರದೇಶಕ್ಕೂ ಬಹುಹಿಂದಿನಿಂದಲೂ ವಿವಿಧ ಆಯಾಮಗಳ ಸಂಬಂಧ ವಿದ್ದುದರಿಂದ ಇಲ್ಲಿನ ಬಹುತೇಕ ರಚನೆ, ಆಗಮ ಶಾಸ್ತ್ರ, ಪ್ರಶ್ನಾ ಚಿಂತನೆ, ತಂತ್ರ ಮಂತ್ರಗಳ ಅನುಷ್ಠಾನದಲ್ಲಿ ಕೇರಳದ ದಟ್ಟವಾದ ಛಾಯೆಯನ್ನು ಅಂದು ಮತ್ತು ಇಂದೂ ಕೂಡಾ ಕಾಣಬಹುದು. ಅಲ್ಲದೆ ಕೇರಳ ಮೂಲದ ದೇವಾಲಯ, ಮಸೀದಿ ನಿರ್ಮಾಣಕಾರರು, ಕಾರ್ಮಿಕರು, ಕುಶಲಕರ್ಮಿಗಳು ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಶತಮಾನಗಳ ಹಿಂದಿನಿಂದಲೇ ಶ್ರಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕಾರಣದಿಂದ ಇಲ್ಲಿನ ಬಹುತೇಕ ದೇವಾಲಯಗಳು ಮತ್ತು ಮಸೀದಿಗಳು ಕೇರಳದಿಂದ ಪ್ರಭಾವಿಸಲ್ಪಟ್ಟ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾದುವು.
ಕರಾವಳಿ ಪ್ರದೇಶದ ಬಹುತೇಕ ಮಸೀದಿಗಳ ನಿರ್ಮಾಣ ಕಾರ್ಯದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಮಿಕರಾಗಿ, ಕುಶಲಕರ್ಮಿಗಳಾಗಿ ಕೆಲಸ ನಿರ್ವಹಿಸುತ್ತಿದ್ದುದು ಹಿಂದೂ ಧರ್ಮೀಯ ಶ್ರಮಿಕರಾಗಿದ್ದರು. ಇಲ್ಲಿನ ಬಹುಪಾಲು ಮುಸ್ಲಿಮರು ವ್ಯಾಪಾರಿಗಳು, ಕೃಷಿಕಾರ್ಮಿಕರು ಇಲ್ಲವೇ ಸಾಮಾನ್ಯ ಶ್ರಮ ಜೀವನವನ್ನು ನಿರ್ವಹಿಸುತ್ತಿದ್ದ ವರ್ಗವಾಗಿದ್ದರು. ಮಸೀದಿಗಳ ಆಯ, ಅಡಿಪಾಯ, ಗೋಡೆ, ಛಾವಣಿ, ಜಗಲಿ, ಮರದ ಕೆತ್ತನೆ, ಮಾಡು ಇತ್ಯಾದಿ ಕೆಲಸಕಾರ್ಯಗಳಲ್ಲಿ ಹಿಂದೂ ಕುಶಲಕರ್ಮಿಗಳ ಪಾತ್ರ ಹಿರಿದಾಗಿತ್ತು. ಸಹಜವಾಗಿಯೇ ಅಂದಿನಕಾಲದಲ್ಲಿ ಯಾವುದೇ ಒಂದು ವಾಸ್ತು ಶೈಲಿಯು ಅಲ್ಪಕಾಲದಲ್ಲಿ ಬದಲಾವಣೆಗೆ ಒಳಗಾಗುತ್ತಿರಲಿಲ್ಲ. ಅದು ಅನೇಕ ಕಾಲ ಯಥಾಸ್ಥಿತಿಯಲ್ಲಿ ಮುಂದುವರಿಯುತ್ತಿತ್ತು. ಕರ್ನಾಟಕದ ಕರಾವಳಿ ಮತ್ತು ಕೇರಳದ ಬಹುತೇಕ ಪುರಾತನ ಮಸೀದಿಗಳ ವಾಸ್ತುಶಿಲ್ಪಕ್ಕೂ ಪುರಾತನ ದೇವಾಲಯಗಳ ವಾಸ್ತುಶಿಲ್ಪಕ್ಕೂ ಹೆಚ್ಚಿನ ಭಿನ್ನತೆ ಕಾಣಲಾಗದು.ವಿಶೇಷವಾಗಿ ಮೇಲ್ನೋಟಕ್ಕೆ ಕಾಣುವಾಗ ಮಸೀದಿ ಮತ್ತು ದೇವಾಲಯಗಳು ಒಂದೇ ವಾಸ್ತುಶೈಲಿಯಲ್ಲಿ ಕಂಗೊಳಿಸುತ್ತವೆ. ಎಲ್ಲಾ ಮಸೀದಿಗಳು ಪಶ್ಚಿಮಕ್ಕೆ ಮುಖ ಮಾಡಿರುತ್ತವೆ. ದೇವಾಲಯಗಳಲ್ಲಿ ಗರ್ಭಗುಡಿಯಿದ್ದರೆ ಮಸೀದಿಗಳಲ್ಲಿ ಪಶ್ಚಿಮ ದಿಕ್ಕಿಗೆ ಪ್ರಾರ್ಥನೆಯನ್ನು ಸಲ್ಲಿಸಲು ಅನುಕೂಲವಾಗುವಂತಹ ಉಬ್ಬು ಗೋಡೆಯನ್ನು ಕಾಣಬಹುದು.ದೇವಾಲಯಗಳಲ್ಲಿ ಮಂಟಪಗಳ ರಚನೆಯಿದ್ದರೆ ಪುರಾತನ ಮಸೀದಿಗಳಲ್ಲಿ ಮೊಗಸಾಲೆ ಅಥವಾ ವಿಶಾಲವಾದ ಜಗಲಿಯನ್ನು ಕಾಣಬಹುದು. ಇನ್ನು ಛಾವಣಿಯು ಸಮಾನ ಲಕ್ಷಣಗಳನ್ನು ಹೊಂದಿದ್ದವು. ಮರದಿಂದ ರಚಿಸಲ್ಪಟ್ಟ ಛಾವಣಿಯು ಕರ್ನಾಟಕದ ಕರಾವಳಿ ಮತ್ತು ಕೇರಳ ಭಾಗದಲ್ಲಿ ಸಾಮಾನ್ಯವಾದ ಅಂಶಗಳಾಗಿದ್ದವು.
ಈ ಭಾಗದಲ್ಲಿ ಸುರಿಯುತ್ತಿದ್ದ ಅಧಿಕ ಮಳೆಯನ್ನು ಲಕ್ಷಿಸಿ ಇಳಿಜಾರಾದ ಛಾವಣಿಯನ್ನು ದೇವಾಲಯ ಮತ್ತು ಮಸೀದಿಗಳಲ್ಲಿ ನಿರ್ಮಿಸಲಾಗುತ್ತಿತ್ತು. ಇವೆರಡೂ ಪಾವಿತ್ರತೆಯ ಸ್ಥಳಗಳಾದುದರಿಂದ ಮತ್ತು ಜನರ ಭಾವನೆಗಳೊಂದಿಗೆ ನೇರವಾದ ಸಂಬಂಧವನ್ನು ಹೊಂದಿದ್ದರಿಂದ ಇವುಗಳ ನಿರ್ಮಾಣ ಕಾರ್ಯದಲ್ಲಿ ವಿಶೇಷ ಆಸ್ಥೆಯನ್ನು ವಹಿಸಲಾಗುತ್ತಿತ್ತು. ಛಾವಣಿಯನ್ನು ಮರದ ಕೆತ್ತನೆಗಳ ಮೂಲಕ ಆಕರ್ಷಕವಾಗಿಸಲಾಗುತ್ತಿತ್ತು.
ದೂರದಿಂದಲೇ ಕಾಣುವಂತಹ ಎತ್ತರದ ಛಾವಣಿ ಅದರ ಮೇಲೆ ಮುಗುಳಿಯನ್ನು ಇಡಲಾಗುತ್ತಿತ್ತು. ಇದು ದೇವಾಲಯ ಮಾತ್ರವಲ್ಲದೆ ಮಸೀದಿಗಳಲ್ಲಿಯೂ ಕಾಣಬಹುದಿತ್ತು. ಎತ್ತರದ ಎರಡು ಮಾಡು ( ಛಾವಣಿ) ಅಥವಾ ನಾಲ್ಕು ಮಾಡಿನ ರಚನೆ, ಈ ಮಾಡಿನ ಮೇಲೆ ಆಕರ್ಷಕ ಮರದ ಕೆತ್ತನೆಯ ಆಧಾರಸ್ತಂಭಗಳನ್ನು ಇಟ್ಟು ಮತ್ತೊಂದು ಪುಟ್ಟ ಛಾವಣಿಯನ್ನು ಅದರ ಮೇಲೆ ನಿರ್ಮಿಸುವುದು ಅಂದಿನ ಸಾಮಾನ್ಯ ಶೈಲಿಯಾಗಿತ್ತು.
ಕೇರಳ ಮೂಲದ ದ್ರಾವಿಡ ಶೈಲಿಯ ಮಸೀದಿ ಅಥವಾ ದೇವಾಲಯಗಳ ನಡುವೆ ಬಲು ಸನಿಹದವರೆಗೂ ವ್ಯತ್ಯಾಸ ಗುರುತಿಸಲು ಸಾಧ್ಯವಿಲ್ಲ. ದೇವಾಲಯದ ಅಂಗಳದಲ್ಲಿ ಧ್ವಜಸ್ತಂಭವಿರುತ್ತಿತ್ತು. ಬಹುತೇಕ ಮಸೀದಿ ಮತ್ತು ದೇವಾಲಯಗಳೆರಡರ ಅಂಗಳದಲ್ಲೂ ಪುಷ್ಕರಣಿ ( ಕೆರೆ) ಯ ರಚನೆ ಕಾಣಬಹುದು.
ಕೇರಳದ ಬಹುತೇಕ ಪುರಾತನ ಮಸೀದಿ ಮತ್ತು ದೇವಾಲಯಗಳಲ್ಲಿ ಈ ಮೇಲೆ ಉಲ್ಲೇಖಿಸಲಾದ ಸಮಾನ ಲಕ್ಷಣಗಳನ್ನು ಇಂದಿಗೂ ಕಾಣಬಹುದು.
ಕಾಸರಗೋಡಿನ ಮಾಲಿಕ್ ದೀನಾರ್ ಮಸೀದಿ, ಇಚ್ಲಂಗೋಡಿನ ಮಸೀದಿ, ಮಂಗಳೂರಿನ ಪುರಾತನ ಜುಮಾ ಮಸೀದಿ, ಪಾಣೆಮಂಗಳೂರಿನ ಶತಮಾನಗಳ ಹಿಂದಿನ ಮಸೀದಿಗಳಲ್ಲಿ ಸುಂದರವಾದ ವಾಸ್ತುಶಿಲ್ಪ ಶೈಲಿ ಮತ್ತು ಕೆರೆಗಳನ್ನು ಇಂದಿಗೂ ಕಾಣಬಹುದು. ದಕ್ಷಿಣ ಕನ್ನಡ ಜಿಲ್ಲೆಯ ಪುರಾತನ ಮಸೀದಿಗಳ ಬಗ್ಗೆ ಮಾತ್ರ ಅಧ್ಯಯನ ಮಾಡುವುದಾದರೆ ಇಲ್ಲಿ ನದಿ ಇಲ್ಲವೇ ಸಮುದ್ರಗಳ ತೀರಗಳಲ್ಲಿಯೇ ಹಿಂದಿನಕಾಲದ ಮಸೀದಿಗಳು ನಿರ್ಮಾಣವಾದುದನ್ನು ಗಮನಿಸಬಹುದು.
ಮಂಗಳೂರಿನ ಪುರಾತನ ಜುಮಾ ಮಸೀದಿ, ಅಜಿಲಮೊಗರು ಮಸೀದಿ, ಪೊಳಲಿ, ಮಳಲಿ, ಅಮ್ಮುಂಜೆ, ವಳವೂರು, ಬಾರ್ಕೂರು ಮಸೀದಿಗಳೆಲ್ಲವೂ ಸಮುದ್ರ ಇಲ್ಲವೇ ನದಿ ತೀರಗಳಲ್ಲಿ ನಿರ್ಮಾಣವಾಗಿವೆ. ಅಷ್ಟೇ ಅಲ್ಲದೆ ಇವುಗಳಲ್ಲಿ ಬಹುತೇಕ ಮಸೀದಿಗಳ ಅನತಿ ದೂರದಲ್ಲಿ ಪುರಾತನ ದೇವಾಲಯಗಳಿದ್ದು ಇವೆರಡರ ನಡುವೆ ಸಾಮರಸ್ಯದ ಸಂಬಂಧ ಅನಾದಿಕಾಲದಿಂದ ಬೆಳೆದು ಬಂದಿರುವುದನ್ನು ಕಾಣಬಹುದು. ನೇತ್ರಾವತಿ ನದಿ ತೀರದ ಅಜಿಲಮೊಗರು, ವಳವೂರು, ಪಲ್ಗುಣಿ ನದಿ ತೀರದ ಪೊಳಲಿ, ಮಳಲಿ ಈ ಮಸೀದಿಗಳು ಆಸ್ತಿಕ ವರ್ಗದ ಹರಕೆಯ ಕೇಂದ್ರ ಗಳಾಗಿಯೂ ಪ್ರಸಿದ್ಧ್ದವಾಗಿವೆ. ಇಂದಿಗೂ ಈ ಮಸೀದಿಗಳಿಗೆ ಸರ್ವಧರ್ಮೀಯ ಬಾಂಧವರು ಸದ್ಭಾವನೆಯಿಂದ ನಡೆದುಕೊಂಡು ಬರುತ್ತಿರುವುದನ್ನು ಕಾಣಲು ಸಾಧ್ಯ.
ದೇವಾಲಯ ಮತ್ತು ಮಸೀದಿಗಳಲ್ಲಿ ಬೆಳಕು ಸದಾ ಉರಿಯುತ್ತಿರಬೇಕೆಂಬ ಭಾವನೆ ಇತ್ತು. ಇಲ್ಲಿನ ವಿದ್ಯುತ್ ಬೆಳಕಿಗೆ ಒಂದು ಶತಮಾನದ ಇತಿಹಾಸ ಮಾತ್ರ ಇದೆ. ಆದರೆ ನೂರಾರು ವರ್ಷಗಳ ಹಿಂದೆಯೇ ಸ್ಥಾಪಿಸಲ್ಪಟ್ಟ ದೇವಾಲಯಗಳು ಮತ್ತು ಮಸೀದಿಗಳಲ್ಲಿ ಬೆಳಕಿಗಾಗಿ ದೀಪವನ್ನು ಹೊತ್ತಿಸಿಡುವುದು ಸಾಮಾನ್ಯವಾಗಿತ್ತು. ಮಸೀದಿಯ ಚಾಕರಿ ( ಸೇವೆ ) ಮಾಡುತ್ತಿದ್ದ ಮುಕ್ರಿ ಕುಟುಂಬವು ಮಸೀದಿಯಲ್ಲಿ ದೀಪ ಇಡುವ ಕೆಲಸ ನಿರ್ವಹಿಸುತ್ತಿತ್ತು. ಅದಕ್ಕಾಗಿ ಮುಕ್ರಿ ಕುಟುಂಬಕ್ಕೆ ದವಸ ಧಾನ್ಯ ಗಳನ್ನು ವೇತನದ ರೂಪದಲ್ಲಿ ಹಿಂದೆ ನೀಡಲಾಗುತ್ತಿತ್ತು. ಆದರೆ ಕೆಲವು ಪುರಾತನ ಮಸೀದಿಗಳಲ್ಲಿ ಈ ದೀಪ ಹೊತ್ತಿಸಿಡುವ ಜವಾಬ್ದಾರಿಯನ್ನು ಬಲು ಜತನದಿಂದ ಮಾಡಲಾಗುತ್ತಿತ್ತು.
ಈ ಕಾರ್ಯವು ಪುಣ್ಯದಾಯಕ ಎಂದು ನಂಬಿದ್ದ ಅಂದಿನ ಜನ ಕೆಲವು ಐತಿಹಾಸಿಕ ಮಸೀದಿಗಳಲ್ಲಿ ಅಹೋ ರಾತ್ರಿ ದೀಪ ಇಡುತ್ತಿದ್ದ ಲಕ್ಷಣಗಳನ್ನೂ ಕಾಣಲು ಸಾಧ್ಯ.
ಇದರ ಜೊತೆಗೆ ಅಝಾನ್, ಮಸೀದಿ ಸ್ವಚ್ಚ್ಚತೆಯ ಕಾರ್ಯಗಳನ್ನೂ ನಿರ್ವಹಿಸುತ್ತಿದ್ದ ಮುಕ್ರಿ ಕುಟುಂಬಕ್ಕೆ ಮಸೀದಿಯ ಉಂಬಳಿ ಜಮೀನಿನಲ್ಲಿ ಕೆಲವು ಭಾಗಗಳನ್ನು ವೇತನಕ್ಕೆ ಪರ್ಯಾಯವಾಗಿ ಗೇಣಿಗೆ ನೀಡಲಾಗುತ್ತಿತ್ತು. ಇದು ಪುರಾತನ ಮಸೀದಿಗಳು ನಿರ್ವಹಣೆಗೆ ಒಳಗಾಗುತ್ತಿದ್ದ ಕೆಲವು ಬಗೆಗಳಾದರೆ ಇನ್ನು ಇಂದು ನಮ್ಮ ಮುಂದೆ ಕಾಣುತ್ತಿರುವ ಆಧುನಿಕ ಮಸೀದಿಗಳ ರಚನಾ ಶೈಲಿಯ ಬಗ್ಗೆ ಸ್ವಲ್ಪ ಗಮನ ಹರಿಸೋಣ.
ಆಧುನಿಕ ಮಸೀದಿಗಳ ವಾಸ್ತು ಶೈಲಿ
ಇಂದು ಮಸೀದಿಯನ್ನು ನೋಡಿದ ತಕ್ಷಣದಲ್ಲೇ ಅದನ್ನು ಮಸೀದಿ ಎಂದು ಗುರುತಿಸಲು ದೂರದಿಂದಲೇ ಹಲವು ಲಕ್ಷಣಗಳು ಗೋಚರಿಸುತ್ತವೆ. ಇಂದಿನ ಐವತ್ತು ವಯೋಮಾನದ ಒಳಗಿನ ಜನಸಾಮಾನ್ಯರು ಬಹುತೇಕ ಮಸೀದಿ ಎಂದರೆ ಎತ್ತರದ ಗುಂಬಝ್ ( ಗುಮ್ಮಟ), ಮಿನಾರ ಎಂದೇ ಭಾವಿಸಿದ್ದಾರೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಪುರಾತನ ಕಾಲದ ಬೆರಳೆಣಿಕೆಯ ದ್ರಾವಿಡ ಶೈಲಿಯ ಮಸೀದಿಗಳಿದ್ದರೆ ಉಳಿದದ್ದೆಲ್ಲವೂ ಸಾಧಾರಣ ಮುಳಿ ಹುಲ್ಲು ಇಲ್ಲವೇ ಹಂಚಿನ ಛಾವಣಿಯಿಂದ ನಿರ್ಮಿಸಲ್ಪಟ್ಟ ಮಸೀದಿಗಳಾಗಿತ್ತು. ಕಾಲ ಕಳೆದಂತೆ ಮುಳಿ ಹುಲ್ಲಿನ ಜಾಗದಲ್ಲಿ ಹಂಚು, ಹಂಚಿನ ಜಾಗದಲ್ಲಿ ಕಾಂಕ್ರಿಟ್ ಛಾವಣಿಯ ಮಸೀದಿಗಳು ಹೊಸದಾಗಿ ನಿರ್ಮಾಣವಾಯಿತು. ಕಳೆದ ಮೂರು ನಾಲ್ಕು ದಶಕಗಳ ನಂತರ ಪುನರ್ರ್‌ನಿರ್ಮಾಣಗೊಂಡ ಇಲ್ಲವೇ ಹೊಸದಾಗಿ ನಿರ್ಮಾಣವಾದ ಮಸೀದಿಗಳಲ್ಲಿ ಉತ್ತರ ಭಾರತದ ಮೊಗಲ್ ಶೈಲಿಯ ವಾಸ್ತುಶೈಲಿಯನ್ನು ಅಳವಡಿಸಲಾಯಿತು.
ಹದಿನಾರನೇ ಶತಮಾನದಲ್ಲಿ ಆಡಳಿತಕ್ಕೆ ಬಂದ ಮೊಗಲ್ ಅರಸರು ಬಹುತೇಕ ಕಲೆ ಸಂಸ್ಕೃತಿ ಪ್ರಿಯರಾಗಿದ್ದರು.
ಅವರ ಕಾಲದಲ್ಲಿ ಉತ್ತರ ಭಾರತದಲ್ಲಿ ಮಹೋನ್ನತ ಸ್ಮಾರಕಗಳು, ಅರಮನೆಗಳು, ಮಸೀದಿಗಳು, ಕೋಟೆ, ಸಮಾಧಿಗಳು ನಿರ್ಮಾಣವಾಯಿತು. ಮೊಗಲರ ಕಾಲದ
ಎಲ್ಲಾ ನಿರ್ಮಾಣಗಳು ಇಂಡೊ- ಸಾರ್ಸೆನಿಕ್, ಇಂಡೊ- ಅರೇಬಿಕ್ ಶೈಲಿಯಲ್ಲಿವೆ. ಭಾರತದಲ್ಲಿ ಈ ಎಲ್ಲಾ ರಚನೆಗಳನ್ನು ಇಂಡೋ- ಇಸ್ಲಾಮಿಕ್ ವಾಸ್ತುಶೈಲಿ ಎಂದು ಕೂಡಾ ಕರೆಯಲಾಗಿದೆ. ಭಾರತದ ವಾತಾವರಣಕ್ಕೆ ಅನುಗುಣವಾಗಿ ಪರ್ಶಿಯನ್, ಅರೇಬಿಯನ್ ಶೈಲಿಯನ್ನು ಮಾರ್ಪಾಡು ಮಾಡಿ ಸ್ಮಾರಕ, ಕೋಟೆ, ಮಸೀದಿಗಳನ್ನು ನಿರ್ಮಿಸಲಾಯಿತು.
ಇಂಡೊ ಇಸ್ಲಾಮಿಕ್ ಶೈಲಿಯಲ್ಲಿ ಮುಖ್ಯವಾಗಿ ವಿಶಾಲವಾದ ಪ್ರಾಂಗಣ, ಉತ್ತರ, ದಕ್ಷಿಣ, ಪೂರ್ವ ದಿಕ್ಕುಗಳಲ್ಲಿ ಅಗಲವಾದ, ದಪ್ಪನೆಯ, ಘನವಾದ ಎತ್ತರದ ದ್ವಾರಗಳು, ಆಕರ್ಷಕ ಕಿಟಕಿಗಳು, ಗುಂಬಝ್, ಎತ್ತರವಾದ ಎರಡು ಇಲ್ಲವೇ ನಾಲ್ಕು ಮಿನಾರ ಗಳ ಲಕ್ಷಣಗಳನ್ನು ಕಾಣುತ್ತೇವೆ. ಈ ಶೈಲಿಯ ನಿರ್ಮಾಣಗಳು ತಾಜ್ ಮಹಲ್, ದಿಲಿಯ ಜಾಮಿಯಾ ಮಸೀದಿ ,ಕೆಂಪುಕೋಟೆ, ಹೈದರಾಬಾದ್ ನ ಚಾರ್ ಮಿನಾರ ಸೇರಿದಂತೆ ನೂರಾರು ಐತಿಹಾಸಿಕ ಸ್ಮಾರಕಗಳಲ್ಲಿ ಕಾಣಬಹುದು.
ಈ ಇಂಡೊ ಇಸ್ಲಾಮಿಕ್ ಶೈಲಿಯ ಮಸೀದಿಗಳು ಕರ್ನಾಟಕದ ಬೀದರ್, ಕಲಬುರಗಿ, ವಿಜಯಪುರ ಮೊದಲಾದೆಡೆ ಶಾಹಿ ಮನೆತನಗಳ ಕಾಲದಲ್ಲಿ ನಿರ್ಮಾಣವಾಯಿತು. ಆದರೆ ಕರ್ನಾಟಕದ ಕರಾವಳಿ,ಕೇರಳ ರಾಜ್ಯಗಳಲ್ಲಿ ಇಲ್ಲಿನ ದ್ರಾವಿಡ ಶೈಲಿಯ ಮಸೀದಿಗಳೇ ಹೆಗ್ಗುರುತುಗಳಾಗಿದ್ದವು. ಅರಬ್ ದೇಶಗಳ ಔದ್ಯೋಗಿಕ ಸಂಪರ್ಕದಿಂದಾಗಿ ಕೇರಳದಲ್ಲಿ ಇಂಡೋ ಇಸ್ಲಾಮಿಕ್ ಶೈಲಿಯನ್ನು ಹೋಲುವ ಮತ್ತು ಅದರಲ್ಲೂ ಆಧುನಿಕತೆಯ ನವೀನ ಶೈಲಿಯ ಮಸೀದಿಗಳು ಹೊಸದಾಗಿ ನಿರ್ಮಾಣವಾದವು. ಇದು ಹೆಚ್ಚು ಕಡಿಮೆ ಮೂರು- ನಾಲ್ಕು ದಶಕಗಳ ಒಳಗಿನ ಬೆಳವಣಿಗೆ.
ಇದ







