"ಹಿಂದುತ್ವದ ಹೆಸರಿನಲ್ಲಿ ನಡೆಸುತ್ತಿರುವ ಹಿಂಸೆಯ ವಿರುದ್ಧ ಜಗತ್ತಿನ ಎಲ್ಲ ಹಿಂದೂಗಳು ಧ್ವನಿಯೆತ್ತಬೇಕು"
ಅಮೆರಿಕಾದ ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್ ಸಂಸ್ಥೆ ಕರೆ

Photo: Alliance for Justice and Accountability
ಹೊಸದಿಲ್ಲಿ: ಜಗತ್ತಿನಾದ್ಯಂತದ ಹಿಂದುಗಳು ತಮ್ಮ ಸಾಮೂಹಿಕ ಮೌನವನ್ನು ಮುರಿದು ಹಿಂದುತ್ವದ ಹೆಸರಿನಲ್ಲಿ ಭಾರತದಲ್ಲಿ ಮುಸ್ಲಿಮರ ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ಬಿತ್ತುವ ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ದನಿಯೆತ್ತಬೇಕು ಎಂಬ ಅಮೆರಿಕಾದ ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್ ಸಂಸ್ಥೆ ನೀಡಿದ ಹೇಳಿಕೆಗೆ ವಿವಿಧ ಹಿಂದು ಸಂಘಟನೆಗಳು ಮತ್ತು ಧಾರ್ಮಿಕ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಹಿಂದುತ್ವದ ಹೆಸರಿನಲ್ಲಿ ಮುಸ್ಲಿಮರನ್ನು ಹಿಂಸಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ವೈವಿಧ್ಯಮಯ ಹಿಂದು ಸಂಪ್ರದಾಯಗಳ ಪ್ರತಿನಿಧಿಗಳಾಗಿ ನಮಗೆ, ಭಾರತದಲ್ಲಿನ ಮತ್ತು ವಿದೇಶಗಳಲ್ಲಿರುವ ಹಿಂದು ನಾಯಕರು ಹಿಂದುತ್ವದ ಹೆಸರಿನಲ್ಲಿ ಇತರ ಧರ್ಮಗಳವರನ್ನು ಹೊರಗಿನವರೆಂಬಂತಹ ರೀತಿಯಲ್ಲಿ ನೋಡುತ್ತಿರುವುದು ಹಾಗೂ ಅವರು ಭಾರತದ ಪೌರತ್ವದ ಸಂಪೂರ್ಣ ಪ್ರಯೋಜನಗಳನ್ನು ಅನುಭವಿಸಲು ಅರ್ಹರಲ್ಲ ಎಂಬರ್ಥದ ರೀತಿಯಲ್ಲಿ ನೋಡುತ್ತಿರುವುದು ಆಘಾತ ಮೂಡಿಸಿದೆ, ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
"ಕೇಸರಿ ವಸ್ತ್ರಧಾರಿ ಸಾಧುಗಳು ಹಾಗೂ ಕೆಲ ಸಂತರು ಹರಿದ್ವಾರ ಧರ್ಮ ಸಂಸದ್ನಲ್ಲಿ ಮುಸ್ಲಿಮರ ನರಮೇಧಕ್ಕೆ ಕರೆ ನೀಡಿರುವುದು ಭಯಾನಕ ಹಾಗೂ ನಿರ್ಲಕ್ಷ್ಯ ವಹಿಸುವಂತಹುದ್ದಲ್ಲ" ಎಂದು ಹೇಳಿಕೆ ತಿಳಿಸಿದೆ.
ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಹ ದೇಶಗಳಲ್ಲಿ ಅಲ್ಲಿನ ಅಲ್ಪಸಂಖ್ಯಾತರಾಗಿರುವ ಹಿಂದುಗಳ ಮೇಲಿನ ಹಿಂಸೆಯು ಭಾರತದಲ್ಲಿ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಕ್ಕೆ ಸಮರ್ಥನೆಯಾಗುವುದಿಲ್ಲ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಹೇಳಿಕೆಗೆ ಆರ್ಯಸಮಾಜ್ ಮಂದಿರ, ಅಮೃತಪುರಿ, ಹೊಸದಿಲ್ಲಿ, ಗ್ಲೋಬಲ್ ನೈತಿಕ್ ಶಿಕ್ಷಾ ಕೇಂದ್ರ, ದಿಲ್ಲಿ/ಥುರಾ. ಹಿಂದು ಟೆಂಪಲ್ ಸೊಸೈಟಿ ಆಫ್ ನ್ಯೂ ಮೆಕ್ಸಿಕೋ, ಜ್ಯೋತಿ ಮಂದಿರ್, ಒರ್ಲಾಂಡೊ, ಮಾತ್ರಿ ಸದನ್ ಆಶ್ರಮ, ಹರಿದ್ವಾರ, ಪ್ರೇಮ್ ಭಕ್ತಿ ಮಂದಿರ್, ನ್ಯೂಯಾರ್ಕ್ ಮತ್ತು ಇನ್ನೂ ಹಲವಾರು ಸಂಘಟನೆಗಳು ಮತ್ತು ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ.







