ಬೆಂಗಳೂರು : ಯುವತಿಯ ಮೇಲೆ ಆ್ಯಸಿಡ್ ದಾಳಿ

ಬೆಂಗಳೂರು : ಪ್ರೀತಿ ನಿರಾಕರಿಸಿದ ಆರೋಪದಲ್ಲಿ 23 ವರ್ಷದ ಯವತಿಯ ಮೇಲೆ ಆ್ಯಸಿಡ್ ದಾಳಿ ನಡೆದಿರುವ ಘಟನೆ ಬೆಂಗಳೂರಿನಲ್ಲಿ ಬುಧವಾರ ವರದಿಯಾಗಿದೆ.
ನಗರದ ಸುಂಕದ ಕಟ್ಟೆಯಲ್ಲಿ ಕೆಲಸ ಮಾಡಲು ತೆರಳುತ್ತಿದ್ದ ವೇಳೆ ನಾಗೇಶ್ ಎಂಬಾತ ಯುವತಿಯ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ ಎಂದು ದೂರಲಾಗಿದೆ.
ಸಂತ್ರಸ್ತ ಯುವತಿ ಇಲ್ಲಿನ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ನಾಗೇಶ್ ಎಂಬಾತ ಈ ಯುವತಿಯನ್ನು ಪ್ರೀತಿಸು ಎಂದು ಪೀಡಿಸುತ್ತಿದ್ದು, ಆದರೆ ನಾಗೇಶ್ ಪ್ರೀತಿಯನ್ನು ಯುವತಿ ನಿರಾಕರಿಸಿದ್ದು, ಇದೇ ವಿಚಾರಕ್ಕೆ ಯುವತಿ ಹಾಗೂ ನಾಗೇಶ್ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ.
ಪ್ರೀತಿ ನಿರಾಕರಿಸಿದ್ದಾಳೆ ಎಂಬ ಆಕ್ರೋಶಗೊಂಡು ನಾಗೇಶ್ ಯುವತಿಯ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ. ಕೂಡಲೇ ಸ್ಥಳೀಯರು ಸಂತ್ರಸ್ತ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಮಾಹಿತಿಯನ್ನು ಪೊಲೀಸರಿಗೆ ರವಾನಿಸಿದ್ದರು.
ಯುವತಿಗೆ ಕತ್ತು, ಎದೆ ಮತ್ತು ಕಾಲು ಸೇರಿದಂತೆ ಇನ್ನಿತರ ಭಾಗಗಳಲ್ಲಿ ಆ್ಯಸಿಡ್ ಗಾಯಗಳಾಗಿವೆ. ವೈದ್ಯರು ಯುವತಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆ್ಯಸಿಡ್ ಬಗ್ಗೆ ದೂರು ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ್ ತಿಳಿಸಿದ್ದಾರೆ.







