ಸಂತೋಷ್ ಅಂದ್ರಾದೆಯ ಕಲಾಕೃತಿ ಇಂಡಿಯಾ ಆರ್ಟ್ ಫೇರ್‌ಗೆ ಆಯ್ಕೆ

ಮಂಗಳೂರು : ನಗರದ ಕಲಾವಿದ ಸಂತೋಷ್ ದೀಪಕ್ ಅಂದ್ರಾದೆಯ ಕಲಾಕೃತಿಗಳು 13ನೇ ಇಂಡಿಯಾ ಆರ್ಟ್ ಫೇರ್‌ನಲ್ಲಿ ಭಾಗವಹಿಸಲು ಆಯ್ಕೆಯಾಗಿದೆ.
ಹೊಸದಿಲ್ಲಿಯ ಓಖ್ಲಾ ಪ್ರದೇಶದಲ್ಲಿರುವ ಎನ್‌ಎಸ್‌ಐಸಿ ಎಕ್ಸಿಬಿಷನ್ ಮೈದಾನದಲ್ಲಿ ಗುರುವಾರ ಆರಂಭಗೊಂಡ ಪ್ರದರ್ಶನವು ಮೇ 1ರವರೆಗೆ ನಡೆಯಲಿದೆ.
ಇಂಡಿಯಾ ಆರ್ಟ್ ಫೇರ್ ದಕ್ಷಿಣ ಏಷ್ಯಾದಿಂದ ಅತ್ಯಾಧುನಿಕ ಮತ್ತು ಸಮಕಾಲೀನ ಕಲೆಯನ್ನು ವೀಕ್ಷಿಸಲು ಇರುವ ಪ್ರಮುಖ ವೇದಿಕೆಯಾಗಿದೆ. 2018ರಿಂದ ಪ್ರತೀ ವರ್ಷ ನಡೆಯುತ್ತಿದ್ದು, ದೇಶಾದ್ಯಂತದ 70ಕ್ಕೂ ಅಧಿಕ ಮಂಚೂಣಿಯಲ್ಲಿರುವ ಕಲಾವಿದರ ಕೃತಿ ಪ್ರದರ್ಶನಗೊಳ್ಳಲಿದೆ.
ಈ ವರ್ಷದ ಆರಂಭದಲ್ಲಿ ತೆಲಂಗಾಣ ಸರಕಾರದ ಸ್ಟೇಟ್ ಗ್ಯಾಲರಿ ಆಫ್ ಆರ್ಟ್ ಆಯೋಜಿಸಿದ 3 ನೇ ಅಖಿಲ ಭಾರತ ಕಲಾ ಸ್ಪರ್ಧೆ ಮತ್ತು ಪ್ರದರ್ಶನದಲ್ಲಿ ಅವರನ್ನು ಎರಡನೇ ವಿಜೇತ ಎಂದು ಗುರುತಿಸಲಾಗಿತ್ತು. 2020ರಲ್ಲಿ ಎನ್‌ಡಿಟಿ ಇಂಡಿಯಾದ ಅಂಗಸಂಸ್ಥೆಯಾದ ಮೊಜಾರ್ಟೊ ಆಯೋಜಿಸಿದ ʼಓರಾ 2020 ಸ್ಪರ್ಧೆಯಲ್ಲಿ ೩ ಲಕ್ಷ ರೂ.ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದರು. 2007ರಲ್ಲಿ ಕರ್ನಾಟಕ ಲಲಿತಕಲಾ ಅಕಾಡಮಿ ಪ್ರಶಸ್ತಿಯ ಜೊತೆಗೆ ಅನೇಕ ಪ್ರಶಸ್ತಿಗೆ ಭಾಜನರಾಗಿದ್ದರು.