’ಪುಸ್ತಕ ಪ್ರೀತಿಯು ಜೀವನ ಪ್ರೀತಿಯನ್ನು ಪೋಷಿಸುತ್ತದೆ’ : ಉಷಾಲತಾ ಸರಪಾಡಿ

ಮಂಗಳೂರು : ಪ್ರಾಮಾಣಿಕನಾದ ಓದುಗನಿಗೆ, ಬರಹಗಾರನಿಗೆ, ರಂಗಭೂಮಿ ಕಲಾವಿದನಿಗೆ ಆತ್ಮವಂಚನೆ ಇಲ್ಲದೆ ಜಗತ್ತನ್ನು ಪ್ರೀತಿಸಲು ಮತ್ತು ಮನುಷ್ಯರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ವಿಜ್ಞಾನವಾಗಲಿ, ಸಾಹಿತ್ಯವಾಗಲಿ ಎರಡರ ಆಶಯವೂ ಒಂದೇ-ಪರಹಿತವನ್ನು ಸಾಧಿಸುವುದು. ಪುಸ್ತಕ ಪ್ರೀತಿಯು ಜೀವನ ಪ್ರೀತಿಯನ್ನು ಪೋಷಿಸುತ್ತದೆ ಎಂದು ಮಂಗಳೂರು ಆಕಾಶವಾಣಿ ಕೇಂದ್ರದ ನಿವೃತ್ತ ಸಹಾಯಕ ನಿಲಯ ನಿರ್ದೇಶಕಿ ಉಷಾಲತಾ ಸರಪಾಡಿ ಅಭಿಪ್ರಾಯಪಟ್ಟರು.
ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಮಂಗಳೂರು ಇದರ ಆಶ್ರಯದಲ್ಲಿ ಉರ್ವಸ್ಟೋರಿನ ಸಾಹಿತ್ಯ ಸದನದಲ್ಲಿ ಶನಿವಾರ ಅಪರಾಹ್ನ ಆಯೋಜಿಸಲಾಗಿದ್ದ ’ಶಾರದಾ ಭಟ್ ಹಾಗೂ ಶ್ರೀಕಲಾ ಉಡುಪ ದತ್ತಿನಿಧಿ ಕಾರ್ಯಕ್ರಮದಲ್ಲಿ ಅವರು ಱಆಧುನಿಕ ರಂಗಭೂಮಿ- ಸವಾಲು ಸಾಧ್ಯತೆಗಳು’ ಎಂಬ ದತ್ತಿ ಉಪನ್ಯಾಸ ನೀಡಿದರು.
ಶ್ರೀಕಲಾ ಉಡುಪ ಅವರು ʼಮಂಥರೆ’ ನಾಟಕ ವಾಚನದ ಮುಖೇನ ಮಂಥರೆಯ ದ್ವಂದ್ವಗಳನ್ನು ಸಮರ್ಥವಾಗಿ ಕಟ್ಟಿಕೊಟ್ಟರು. ಬಡಾ ಎರ್ಮಾಳು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಜ್ಯೋತಿ ಚೇಳಾಯರು ಅಧ್ಯಕ್ಷತೆ ವಹಿಸಿದ್ದರು.
ಅ.ನ.ಪೂರ್ಣಿಮಾ ಸಂದರ್ಭೋಚಿತವಾದ ರಂಗಗೀತೆಗಳನ್ನು ಹಾಡಿದರು. ಅರುಣಾ ನಾಗರಾಜ್ ವಂದಿಸಿದರು. ಗುಣವತಿ ರಮೇಶ್ ಸ್ವಾಗತಿಸಿ, ನಿರೂಪಿಸಿದರು.





