ಪ.ಜಾತಿ-ಪ.ಪಂಗಡದ ನಿವೇಶನ ರಹಿತ, ಗೃಹ ರಹಿತರಿಗೆ ಜಮೀನು ನೀಡಲು ಕ್ರಮ: ಸಚಿವ ಕೋಟ

ಮಂಗಳೂರು : ಯಾವ ಗ್ರಾಮದಲ್ಲಿ ಎಷ್ಟು ಡಿ.ಸಿ. ಮನ್ನಾ ಜಮೀನು ಲಭ್ಯವಿದೆ ಎಂಬುದರ ಪಟ್ಟಿಯನ್ನು ನೀಡುವುದರೊಂದಿಗೆ ಅಂತಹ ಜಾಗದಲ್ಲಿರುವ ಅತಿಕ್ರಮದಾರರು ಯಾರು ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.
ದ.ಕ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ೨೦೨೦-೨೧ನೇ ಸಾಲಿನ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಬಳಕೆ ಯಾಗದೆ ಉಳಿದಿರುವ ಅನುದಾನದ ಬಗ್ಗೆ, ಡಿಸಿ ಮನ್ನಾ ಜಮೀನಿನ ಬಗ್ಗೆ ಹಾಗೂ ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟ ಕಾರ್ಯಕ್ರಮಗಳ ಬಗ್ಗೆ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿವೇಶನ ರಹಿತ ಹಾಗೂ ಗೃಹ ರಹಿತ ಪ.ಜಾತಿ, ಪರಿಶಿಷ್ಟ ಪಂಗಡದವರು ಈಗಾಗಲೇ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದು ಅವರಿಗೆ ಸರಕಾರದಿಂದ ಅನುಮೋದನೆಯಾಗಿರುವ ಜಾಗವನ್ನು ಗುರುತಿಸಿ ನೀಡಬೇಕು. ಪ್ರತಿ ಗ್ರಾಪಂಗಳಲ್ಲಿಯೂ ಮನೆ ರಹಿತರು ಹಾಗೂ ನಿವೇಶನ ರಹಿತರ ಪಟ್ಟಿ ಈಗಾಗಲೇ ಲಭ್ಯವಿರುವುದರಿಂದ ಅದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿ ಅರ್ಹ ಪ.ಜಾತಿ ಹಾಗೂ ಪ.ಪಂಗಡದ ಫಲಾನುಭವಿಗಳ ಪಟ್ಟಿಯನ್ನು ಮೇ 10ರೊಳಗೆ ತಯಾರಿಸುವಂತೆ ಸೂಚಿಸಿದರು.
ಈಗಾಗಲೇ ಪರಿಶಿಷ್ಟ ಜಾತಿಯ ೪,೯೭೪ ಹಾಗೂ ಪರಿಶಿಷ್ಟ ಪಂಗಡದ ೫೦೧ ಮಂದಿ ಅರ್ಜಿ ಸಲ್ಲಿಸಿರುತ್ತಾರೆ.ಜಿಲ್ಲೆಯ ೨೨೩ ಗ್ರಾಮ ಪಂಚಾಯತ್‌ಗಳಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರನ್ನು ಗುರುತಿಸಿ ಸ್ವಂತ ಜಾಗ, ಮನೆ ಹಾಗೂ ಕೃಷಿ ಭೂಮಿಯಿರುವವರ ಬಗ್ಗೆ ಸಮೀಕ್ಷೆ ಮಾಡಬೇಕು ಎಂದರು.
ಮೀನುಗಾರಿಕೆ ಒಳನಾಡು ಬಂದರು ಹಾಗೂ ಜಲಸಾರಿಗೆ ಸಚಿವ ಎಸ್. ಅಂಗಾರ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಅಪರ ಜಿಲ್ಲಾಧಿಕಾರಿಡಾ.ಕೃಷ್ಣಮೂರ್ತಿ, ಶಾಸಕ ಸಂಜೀವ ಮಠಂದೂರು, ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.







