ಪಾವೂರು ಗ್ರಾಪಂ: ಮಾಹಿತಿ, ಶಿಕ್ಷಣ ಚಟುವಟಿಕೆಗೆ ಚಾಲನೆ

ಮಂಗಳೂರು: ಗ್ರಾಮೀಣ ಪ್ರದೇಶಗಳ ಎಲ್ಲಾ ಕುಟುಂಬಗಳಲ್ಲಿ, ಶಾಲೆಗಳಲ್ಲಿ, ಅಂಗನವಾಡಿಗಳಲ್ಲಿ ಶೌಚಾಲಯ ಗಳಿರಬೇಕು. ಮಲ-ಮೂತ್ರ ವಿಸರ್ಜನೆಗಳಿಗೆ ಶೌಚಾಲಯಗಳನ್ನೇ ಬಳಸಬೇಕು. ಉತ್ತಮ ನಿರ್ವಹಣೆ ಇರಬೇಕು, ಗ್ರಾಮದ ಬೀದಿಗಳು, ಓಣಿಗಳು ಶುಚಿಯಾಗಿರಬೇಕು, ಜೊತೆಗೆ ಘನ ಹಾಗೂ ದ್ರವ ತ್ಯಾಜ್ಯ ನಿರ್ವಹಣೆಯು ಸಮರ್ಪಕವಾಗಿರಬೇಕು. ಅದಕ್ಕಾಗಿ ಗ್ರಾಮಗಳ ಸಂಪೂರ್ಣ ಸ್ವಚ್ಛತೆಗೆ ಪೂರಕವಾದ ಚಟುವಟಿಕೆಗಳನ್ನು ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ)ನಡಿ ಕೈಗೊಳ್ಳಲಾಗುತ್ತಿದೆ ಎಂದು ಸ್ವಚ್ಛ ಭಾರತ್ ಮಿಷನ್‌ನ (ಗ್ರಾ) ಮಾಹಿತಿ,ಶಿಕ್ಷಣ ಮತ್ತು ಸಂವಹನ ಸಮಾಲೋಚಕ ಡೊಂಬಯ್ಯ ಇಡ್ಕಿದು ಹೇಳಿದರು.
ಪಾವೂರು ಗ್ರಾಪಂನ ಸ್ವಚ್ಛ ಸಂಕೀರ್ಣ ಕಾರ್ಯಾಚರಣೆ ಸಂಬಂಧ ಮಾಹಿತಿ, ಶಿಕ್ಷಣ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೆಲವು ದಶಕಗಳಿಂದ ವೈಯಕ್ತಿಕ ಸ್ವಚ್ಛತೆ ಮತ್ತು ನೈರ್ಮಲ್ಯ ಕುರಿತಾಗಿ ಹಲವು ಯೋಜನೆಗಳು ಜಾರಿಗೆ ಬಂದ ನಂತರ ರಾಜ್ಯದ ಜನರಲ್ಲಿ ಶುಚಿತ್ವದ ಬಗೆಗಿನ ಅರಿವು ಹೆಚ್ಚಾಗಿದೆ. ವೈಯಕ್ತಿಕ ಸ್ವಚ್ಛತೆ, ಶಾಲೆಯಲ್ಲಿ ಮಕ್ಕಳಿಗೆ ಇದರ ಮಹತ್ವವನ್ನು ತಿಳಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭ ಮಾಹಿತಿ, ಶಿಕ್ಷಣ ಸಂಬಂಧವಾಗಿ ಮನೆಗಳಿಗೆ ಬ್ರೋಷರ್‌ಗಳನ್ನು ವಿತರಿಸಲಾುತು. ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಅರಿವು ಮೂಡಿಸಲಾಯಿತು.
ಪಿಡಿಒ ಸುಧಾರಾಣಿ, ಕಾರ್ಯದರ್ಶಿ ಮಂಜಪ್ಪಎಚ್., ಗ್ರಾಪಂ ಉಪಾಧ್ಯಕ್ಷ ಮುಹಮ್ಮದ್ ಅನ್ಸಾರ್, ಸದಸ್ಯ ವಲೇರಿಯನ್ ಡಿಸೊಜ ಮತ್ತಿತರರು ಉಪಸ್ಥಿತರಿದ್ದರು.







