ಶ್ರೀಲಂಕಾ: ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಮುಷ್ಕರ

photo:twitter/@JDSLanka
ಕೊಲಂಬೊ, ಎ.28: ದೇಶಕ್ಕೆ ಎದುರಾಗಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನ ಹೊಣೆ ಹೊತ್ತು ಅಧ್ಯಕ್ಷ ಗೊತಬಯ ರಾಜಪಕ್ಸ ಮತ್ತವರ ಕುಟುಂಬದವರ ರಾಜೀನಾಮೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆಕೊಟ್ಟಿರುವ ಸಾರ್ವತ್ರಿಕ ಮುಷ್ಕರಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದೆ ಎಂದು ವರದಿಯಾಗಿದೆ.
22 ಮಿಲಿಯನ್ ಜನಸಂಖ್ಯೆಯ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಆಹಾರ, ಔಷಧ, ಇಂಧನ, ವಿದ್ಯುತ್, ಗ್ಯಾಸ್ ಸೇರಿದಂತೆ ದೈನಂದಿನ ಅಗತ್ಯದ ವಸ್ತುಗಳ ತೀವ್ರ ಕೊರತೆ ಎದುರಾಗಿದ್ದು ದೇಶದ ಹಲವೆಡೆ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಆದರೆ ಗುರುವಾರ ನಡೆದ ಪ್ರತಿಭಟನೆಯಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ದೇಶದಲ್ಲಿ ದೈನಂದಿನ ವ್ಯವಹಾರ ಸ್ಥಬ್ಧಗೊಂಡಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದ್ದರೆ, ಅಂಗಡಿ ಮತ್ತು ಕಚೇರಿಗಳು ಮುಚ್ಚಿದ್ದವು. ಶಾಲೆಗಳು ತೆರೆದಿದ್ದರೂ ಮಕ್ಕಳ ಹಾಜರಾತಿ ಅತ್ಯಲ್ಪವಾಗಿತ್ತು ಎಂದು ಪೊಲೀಸರು ಹಾಗೂ ಪ್ರಾದೇಶಿಕ ಅಧಿಕಾರಿಗಳು ಹೇಳಿದ್ದಾರೆ.
100ಕ್ಕೂ ಅಧಿಕ ಕಾರ್ಮಿಕ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದು ಆಡಳಿತಾರೂಢ ಶ್ರೀಲಂಕಾ ಪೊದುಜನ ಪೆರಮುನ ಪಾರ್ಟಿ(ಎಸ್ಎಲ್ಪಿಪಿ)ಗೆ ಸಂಯೋಜಿತವಾಗಿರುವ ಕಾರ್ಮಿಕ ಸಂಘಟನೆಗಳೂ ಮುಷ್ಕರಕ್ಕೆ ಕೈಜೋಡಿಸಿವೆ. ಅಧ್ಯಕ್ಷ ಗೊತಬಯ ರಾಜಪಕ್ಸ, ಅವರ ಸಹೋದರ, ಪ್ರಧಾನಿ ಮಹಿಂದ ರಾಜಪಕ್ಸ ಹಾಗೂ ಇತರ ಕೆಲವು ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು ‘ಗೋ ಹೋಮ್ ಗೊತ’ ಎಂದು ಘೋಷಣೆ ಕೂಗಿದರು. ದೇಶದೆಲ್ಲೆಡೆ ತರಕಾರಿ ಮಾರುಕಟ್ಟೆ ಬಂದ್ ಆಗಿದ್ದರೆ, ದೇಶದ ಪ್ರಮುಖ ರಫ್ತುಮೂಲ ಚಹಾ ತೋಟದ ವ್ಯವಹಾರವನ್ನೂ ಮುಚ್ಚಲಾಗಿತ್ತು. ದೇಶದ ಹಲವು ಪ್ರಮುಖ ನಗರಗಳಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು. ತುರ್ತು ಚಿಕಿತ್ಸೆಯ ಪ್ರಕರಣಗಳಿಗೆ ಮಾತ್ರ ಆಸ್ಪತ್ರೆಯಲ್ಲಿ ಅವಕಾಶವಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಈ ಮಧ್ಯೆ, ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಅಧ್ಯಕ್ಷ ರಾಜಪಕ್ಸ ಶುಕ್ರವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರನ್ನು ಭೇಟಿಯಾಲಿದ್ದಾರೆ ಎಂದು ವರದಿಯಾಗಿದೆ. ತನ್ನನ್ನು ಪದಚ್ಯುತಗೊಳಿಸುವ ಸಾಧ್ಯತೆಯಿಲ್ಲ ಎಂದು ಮಹಿಂದ ರಾಜಪಕ್ಸ ಹೇಳಿದ್ದಾರೆ.







