ಕಪ್ಪು ಸಮುದ್ರದ ನೌಕಾ ನೆಲೆಯ ಭದ್ರತೆಗೆ ತರಬೇತಿ ಪಡೆದ ಡಾಲ್ಫಿನ್ ಗಳ ಸೇನೆಯನ್ನು ನಿಯೋಜಿಸಿದ ರಶ್ಯ

photo:twitter/@MailOnline
ಮಾಸ್ಕೊ, ಎ.28: ಕಪ್ಪು ಸಮುದ್ರದಲ್ಲಿರುವ ತನ್ನ ನೌಕಾ ನೆಲೆಯ ಭದ್ರತೆಗೆ ರಶ್ಯವು ತರಬೇತಿ ಪಡೆದ ಡಾಲ್ಫಿನ್ಗಳ ಸೇನೆಯನ್ನು ನಿಯೋಜಿಸಿದೆ ಎಂದು ಅಮೆರಿಕದ ನೌಕಾ ಸಂಸ್ಥೆ ಯುಎಸ್ಎನ್ಐ ವರದಿ ಮಾಡಿದೆ. ಕಪ್ಪು ಸಮುದ್ರದಲ್ಲಿನ ತನ್ನ ಅತ್ಯಂತ ಪ್ರಮುಖ ಸೆವಾಸ್ಟೊಪೊಲ್ ಬಂದರಿನ ಹೆಬ್ಬಾಗಿಲಿನಲ್ಲಿ ತೇಲುವ ಆವರಣದಲ್ಲಿ 2 ಡಾಲ್ಫಿನ್ ತುಕಡಿಗಳನ್ನು ನಿಯೋಜಿಸಿರುವುದು ಉಪಗ್ರಹದ ಚಿತ್ರಗಳಿಂದ ದೃಢಪಟ್ಟಿದೆ. ಫೆಬ್ರವರಿಯಲ್ಲಿ ಉಕ್ರೇನ್ ಯುದ್ಧ ಆರಂಭಕ್ಕೆ ಕೆಲ ದಿನಗಳ ಮೊದಲು ಇವನ್ನು ಸೆವಾಸ್ಟೊಪೊಲ್ ಬಂದರಿಗೆ ರವಾನಿಸಲಾಗಿದೆ ಎಂದು ಯುಎಸ್ಎನ್ಐ ಹೇಳಿದೆ.
ಡಾಲ್ಫಿನ್ಗಳಲ್ಲಿ ಪ್ರಕೃತಿದತ್ತವಾದ ಸೊನಾರ್ ವ್ಯವಸ್ಥೆಯಿದೆ(ಸೊನಾರ್ ಎಂದರೆ ‘ಸೌಂಡ್ ನ್ಯಾವಿಗೇಷನ್ ಆ್ಯಂಡ್ ರೇಂಜಿಂಗ್’ ಪದದ ಸಂಕ್ಷಿಪ್ತ ರೂಪ). ಅಂದರೆ ಶಬ್ದವನ್ನು ಪತ್ತೆಹಚ್ಚುವ ಮತ್ತು ಆ ಶಬ್ದ ಎಷ್ಟು ದೂರದಿಂದ ಬಂದಿದೆ ಎಂಬುದನ್ನು ನಿರ್ಣಯಿಸುವ ವ್ಯವಸ್ಥೆ. ಇಕೊಲೊಕೇಷನ್ ಎಂದು ಕರೆಯಲಾಗುವ ಗೃಹಣಶಕ್ತಿ ಡಾಲ್ಫಿನ್ಗಳಲ್ಲಿ ಎಷ್ಟು ನಿಖರವಾಗಿರುತ್ತದೆ ಅಂದರೆ ಗಾಲ್ಫ್ ಆಟದಲ್ಲಿ ಬಳಸುವ ಚೆಂಡು ಮತ್ತು ಟೇಬಲ್ ಟೆನಿಸ್ ಆಟದಲ್ಲಿ ಬಳಸುವ ಚೆಂಡು ನೆಲಕ್ಕೆ ಬಿದ್ದಾಗ ಆಗುವ ಶಬ್ದದ ವ್ಯತ್ಯಾಸವನ್ನು ತಕ್ಷಣ ಗುರುತಿಸಿಬಿಡುತ್ತವೆ.
ಸೆವಾಸ್ಟೊಪೊಲ್ ಬಂದರಿನಲ್ಲಿ ಲಂಗರು ಹಾಕಿರುವ ರಶ್ಯದ ನೌಕೆಗಳು ಉಕ್ರೇನ್ನ ಕ್ಷಿಪಣಿ ವ್ಯಾಪ್ತಿಗಿಂತ ಹೊರಗಿದ್ದರೂ, ನೀರಿನೊಳಗಿನ ದಾಳಿಗೆ ಸಿಲುಕುವ ಅಪಾಯವಿದೆ. ಆದರೆ ಈ ಅಪಾಯವನ್ನು ತಡೆಯಲು ಡಾಲ್ಫಿನ್ ಪಡೆಯನ್ನು ನಿಯೋಜಿಸಲಾಗಿದೆ. ನೌಕೆಗಳನ್ನು ಕಾವಲು ಕಾಯುವ ಜತೆಗೆ, ಆಕ್ರಮಣದ ಸೂಚನೆ ಲಭಿಸಿದೊಡನೆ ಪ್ರತ್ಯಾಕ್ರಮಣ ನಡೆಸಲು ಅವುಗಳಿಗೆ ತರಬೇತಿ ನೀಡಿರಬಹುದು ಎಂದು ‘ನ್ಯೂಸ್ವೀಕ್’ ಸಂಸ್ಥೆ ವರದಿ ಮಾಡಿದೆ. ಅಮೆರಿಕದ ನೌಕಾಪಡೆಯೂ 1959ರಿಂದಲೇ ಈ ಪ್ರಯೋಗ ನಡೆಸುತ್ತಿದೆ. ನೌಕೆಗಳ ರಕ್ಷಣೆಗೆ ತರಬೇತಿಗಾಗಿ ಡಾಲ್ಫಿನ್, ಮೀನುಗಳು, ತಿಮಿಂಗಿಲ, ಆಮೆ, ಸಮುದ್ರ ಹಕ್ಕಿಗಳನ್ನು ಆರಿಸಿಕೊಂಡ ಬಳಿಕ ಅಂತಿಮವಾಗಿ ಡಾಲ್ಫಿನ್ ಮತ್ತು ಕ್ಯಾಲಿಫೋರ್ನಿಯಾ ಸಮುದ್ರ ಸಿಂಹಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪತ್ರಿಕೆಯ ವರದಿ ಹೇಳಿದೆ.







