ಸಂಪರ್ಕ ಭಾಷೆಯನ್ನಾಗಿ ಹಿಂದಿ ಬಳಸಿದರೆ ಯಾವ ತಪ್ಪೂ ಇಲ್ಲ: ಸಿ.ಟಿ. ರವಿ

ಚಿಕ್ಕಮಗಳೂರು: ಭಾಷೆ ವಿಚಾರದಲ್ಲಿ ನಮ್ಮ ಮೊದಲ ಆದ್ಯತೆ ಮಾತೃಭಾಷೆಗೇ, ಆದರೆ ಸಂಪರ್ಕ ಭಾಷೆಯನ್ನಾಗಿ ಹಿಂದಿಯನ್ನು ಬಳಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ.
ಹಿಂದಿ ರಾಷ್ಟ್ರಭಾಷೆ ವಿಚಾರ ಸಂಬಂಧ ನಟ ಸುದೀಪ್ ಹೇಳಿಕೆಗೆ ಬಾಲಿವುಡ್ ನಟ ಅಜಯ್‍ದೇವಗನ್ ಮಾಡಿರುವ ಟ್ವೀಟ್ ಬಗ್ಗೆ ಗುರುವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕರ್ನಾಟಕ ರಾಜ್ಯದಲ್ಲಿ ನಮ್ಮ ಅಭಿಮಾನದ ಭಾಷೆ, ಮಾತೃ ಭಾಷೆ ಕನ್ನಡವೇ ಆಗಿರುವುದರಿಂದ ಯಾರೂ ದುಃಖ ಪಡಬೇಕಾಗಿಲ್ಲ. ಮಾತೃ ಭಾಷೆಯನ್ನು ಸಂಕೋಚವಿಲ್ಲದೇ ವಿಶ್ವಾಸದಿಂದ ಮಾತನಾಡಿ ಎಂದು ಪ್ರಧಾನಿಯೇ ಹೇಳಿದ್ದಾರೆ. ಆಯಾ ರಾಜ್ಯಗಳ ಶಿಕ್ಷಣ ನೀತಿಯಲ್ಲಿ ಪ್ರಾದೇಶಿಕ ಭಾಷೆಗೇ ಒತ್ತು ನೀಡಲಾಗಿದೆ ಎಂದರು.
ರಾಷ್ಟ್ರ ಭಾಷೆ ವಿಚಾರಕ್ಕೆ ಸಂಬಂಧಿಸಿದಂತೆ ಸಿನೆಮಾ ನಟರಿಬ್ಬರ ನಡುವೆ ನಡೆದ ವಾಕ್ಸಮರಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಅದನ್ನೂ ಅತಿರೇಕಕ್ಕೂ ಕೊಂಡೊಯ್ಯಬೇಕಾಗಿಲ್ಲ. ನಮ್ಮ ಮೊದಲ ಆಧ್ಯತೆ ಮಾತೃಭಾಷೆಗೆ ಇರಲಿ, ಆದರೆ ಸಂಪರ್ಕ ಭಾಷೆಯನ್ನಾಗಿ ಹಿಂದಿ ಬಳಸಿದಲ್ಲಿ ಯಾವ ತಪ್ಪೂ ಇಲ್ಲ ಎಂದರು.





