ಉ.ಪ್ರ. 12ನೇ ತರಗತಿ ಇಂಗ್ಲೀಷ್ ಪ್ರಶ್ನಾ ಪತ್ರಿಕೆ ಸೋರಿಕೆ ಹಗರಣ: ಮೂವರು ಆರೋಪಿಗಳ ವಿರುದ್ಧ ಎನ್ಎಸ್ಎ ಹೇರಿಕೆ

photo:twitter
ಲಕ್ನೋ,ನ.28: ಉತ್ತರಪ್ರದೇಶದ ಪರೀಕ್ಷಾ ಮಂಡಳಿಯ 12ನೇ ತರಗತಿ ಪ್ರಶ್ನಾ ಪತ್ರಿಕೆ ಸೋರಿಕೆಯಾದ ಪ್ರಕರಣದಲ್ಲಿ ಶಾಮೀಲಾಗಿದ್ದಾರೆಂಬ ಆರೋಪದಲ್ಲಿ ಮೂವರು ಆರೋಪಿಗಳ ವಿರುದ್ಧ ಬಾಲಿಯಾ ಜಿಲ್ಲಾ ಪೊಲೀಸರು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ)ಯನ್ನು ಹೇರಿದ್ದಾರೆ. ಪ್ರಶ್ನಾ ಪತ್ರಿಕೆ ಸೋರಿಕೆ ಹಗರಣದ ಆರೋಪಿಗಳನ್ನು ರವೀಂದ್ರನಾಥ್ ಸಿಂಗ್,ರಾಜೀವ್ ಪ್ರತಾಪ್ ಅಲಿಯಾಸ್ ರಾಜು ಹಾಗೂ ನಿರ್ಭಯ್ ನಾರಾಯಣ್ ಸಿಂಗ್ ಎಂಬುದಾಗಿ ಗುರುತಿಸಲಾಗಿದೆ. ಈ ಮೂವರು ಆರೋಪಿಗಳನ್ನು ಪೊಲೀಸರು ಎಪ್ರಿಲ್ 3ರಂದು ಬಂಧಿಸಿದ್ದರು.
‘ ಉತ್ತರಪ್ರದೇಶ ರಾಜ್ಯ ಪರೀಕ್ಷಾ ಮಂಡಳಿಯ 12ನೇ ತರಗತಿಯ ಇಂಗ್ಲೀಷ್ ಪ್ರಶ್ನಾಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದ್ದರಿಂದ ಮಾಚ್ 30ರಂದು ನಡೆಯಲಿದ್ದ ಪರೀಕ್ಷೆಯನ್ನು ರಾಜ್ಯದ 75 ಜಿಲ್ಲೆಗಳ ಪೈಕಿ 24ರಲ್ಲಿ ರದ್ದುಪಡಿಸಲಾಗಿದೆ. ಈ ಸಂಬಂಧ ನಗ್ರಾದ ಭೀಮ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ. ತರುವಾಯ ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ)ಯ ನಿಯಮಗಳಡಿ ಪ್ರಕರಣ ದಾಖಲಾಗಿದೆ ಎಂದು ರಾಜ್ಯ ಪೊಲೀಸರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಹಾರಾಣಿ ದೇವಿ ಸ್ಮಾರಕ್ ಇಂಟರ್ ಕಾಲೇಜಿ ಮ್ಯಾನೇಜರ್ ಆಗಿರುವ ನಿರ್ಭಯ್ ನಾರಾಯಣ್ ಸಿಂಗ್ ಅವರು ಪ್ರಶ್ನೆ ಪತ್ರಿಕೆಯನ್ನು ಅಕ್ರಮವಾಗಿ ಪಡೆದುಕೊಂಡಿದ್ದನು. ಇಬ್ಬರು ಇಂಗ್ಲೀಷ್ಶಿಕ್ಷಕರ ನೆರವಿನಿಂದ ಅದಕ್ಕೆ ಉತ್ತರಗಳನ್ನು ಕೂಡಾ ತಯಾರಿಸಿದ್ದು, ಅವುಗಳನ್ನು ಪ್ರತಿ ವಿದ್ಯಾರ್ಥಿಗೆ 25 ಸಾವಿರ ರೂ.ಗಳಿಂದ 30 ಸಾವಿರ ರೂ. ಬೆಲೆಗೆ ಮಾರಾಟ ಮಾಡಿದ್ದನು.
ಪ್ರಕರಣದ ಇತರ ಆರೋಪಿಗಳಾದ ರವೀಂದ್ರ ನಾಥ್ ಸಿಂಗ್ ಹಾಗೂ ರಾಜೀವ್ ಪ್ರಜಾಪತಿ ಅವರು ಪ್ರಶ್ನಾ ಪತ್ರಿಕೆಯ ಸ್ಕಾನ್ ಮಾಡಿದ ಪ್ರತಿಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಇತರ ಜನರಿಗೆ ಕಳುಹಿಸಿಕೊಟ್ಟಿದ್ದರು. ಈ ಮೂವರು ಆರೋಪಿಗಳು ವಿದ್ಯಾರ್ಥಿಗಳಿಂದ ಪಡೆದುಕೊಂಡ ಹಣವನ್ನು ಪೇಟಿಎಂ ಮೂಲಕ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಳ್ಳುತ್ತಿದ್ದರು.