ಎಸ್ ಸಿಡಿಸಿಸಿ ಬ್ಯಾಂಕಿಗೆ ಅಟಲ್ ಪಿಂಚಣಿ ಯೋಜನೆಯ ರಾಷ್ಟ್ರೀಯ ಪ್ರಶಸ್ತಿ

ಮಂಗಳೂರು: ಭಾರತ ಸರ್ಕಾರದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನವದೆಹಲಿ ಇವರು ನೀಡಿದ ಅಟಲ್ ಪಿಂಚಣಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ 2021-22ನೇ ಸಾಲಿನ 'ಎಪಿವೈ ರಾಷ್ಟ್ರೀಯ ಪ್ರಶಸ್ತಿ' ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ ಸಿಡಿಸಿಸಿ ಬ್ಯಾಂಕ್) ಗೆ ಲಭಿಸಿದೆ.
ಭಾರತ ಸರ್ಕಾರದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗುರುವಾರ ನವ ದೆಹಲಿಯಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಎಸ್ ಸಿಡಿಸಿಸಿ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಬಿ ಅವರು ಎಪಿವೈ ರಾಷ್ಟ್ರೀಯ ಪ್ರಶಸ್ತಿಯನ್ನು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಅವರಿಂದ ಸ್ವೀಕರಿಸಿದರು.
ಭಾರತ ಸರ್ಕಾರದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕೋರಿಕೆಯಂತೆ ಎಸ್ ಸಿಡಿಸಿಸಿ ಬ್ಯಾಂಕ್ 2019ರ ಜನವರಿ -11ರಂದು ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದು , ಬ್ಯಾಂಕಿನ ಪ್ರತಿ ಶಾಖೆಗಳಿಗೆ ವಾರ್ಷಿಕವಾಗಿ ಅಟಲ್ ಪಿಂಚಣಿ ಯೋಜನೆಗೆ 20 ಮಂದಿ ಚಂದಾದಾರರನ್ನು ನೊಂದಾಯಿಸುವ ಗುರಿಯನ್ನು ನೀಡಲಾಗಿತ್ತು. 2019-20 ರ ಆರ್ಥಿಕ ವರ್ಷದಲ್ಲಿ 466 ಚಂದಾದಾರರನ್ನು, 2020-21 ರ ಹಣಕಾಸು ವರ್ಷದಲ್ಲಿ ಚಂದಾದಾರರ ಒಟ್ಟು ನೋಂದಣಿ 942 ಕ್ಕೆ ತಲುಪಿತು. ಆದರೆ , 2021-22 ರ ಆರ್ಥಿಕ ವರ್ಷದಲ್ಲಿ ಈ ಯೋಜನೆಯಲ್ಲಿ ಬ್ಯಾಂಕ್ ಗಣನೀಯ ಪ್ರಗತಿ ಸಾಧಿಸಿದ್ದು ಮಾತ್ರವಲ್ಲ ಒಟ್ಟು 2936 ಚಂದಾದಾರರ ನೋಂದಣಿಯೊಂದಿಗೆ ದಾಖಲೆ ನಿರ್ಮಿಸಿ ರಾಜ್ಯದ ಮೊದಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎನ್ನುವ ಖ್ಯಾತಿಗೆ ಎಸ್ ಸಿಡಿಸಿಸಿ ಬ್ಯಾಂಕ್ ಪಾತ್ರವಾಗಿದೆ.
ಬ್ಯಾಂಕಿನ ಈ ಕ್ರೀಯಾಶೀಲತೆಯನ್ನು ಗುರುತಿಸಿ ಭಾರತದ ಸರ್ಕಾರದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಅಟಲ್ ಪಿಂಚಣಿ ಯೋಜನೆಯ ರಾಷ್ಟ್ರೀಯ ಮೆಚ್ಚುಗೆ ಪ್ರಶಸ್ತಿಯನ್ನು ಎಸ್ ಸಿಡಿಸಿಸಿ ಬ್ಯಾಂಕಿಗೆ ನೀಡಿ ಗೌರವಿಸಿದೆ. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಛೇರ್ ಮೆನ್ ಸುಪ್ರತಿಮ್ ಬಂಡೋಪಾಧ್ಯಯ , ಪ್ರಾಧಿಕಾರದ ಅರ್ಥಶಾಸ್ತ್ರ ವಿಭಾಗದ ಸದಸ್ಯ ದೀಪಕ್ ಮೊಹಂತಿ, ಕಾರ್ಯನಿರ್ವಾಹಕ ನಿರ್ದೇಶಕ ಎ.ಜಿ.ದಾಸ್ ಹಾಗೂ ಮುಖ್ಯ ಮಹಾಪ್ರಬಂಧಕ ಅಶೀಶ್ ಕುಮಾರ್ ಉಪಸ್ಥಿತರಿದ್ದರು.







