ಉಕ್ರೇನ್ ಗೆ ಭಾರೀ ಶಸ್ತ್ರಾಸ್ತ್ರ ಒದಗಿಸಲು ಜರ್ಮನಿ ಸಂಸತ್ತು ಒಪ್ಪಿಗೆ

PHOTO:TWITTER
ಬರ್ಲಿನ್, ಎ.28: ರಶ್ಯದ ದಾಳಿಯನ್ನು ಹಿಮ್ಮಟ್ಟಿಸಲು ಉಕ್ರೇನ್ಗೆ ಟ್ಯಾಂಕ್, ಯುದ್ಧವಿಮಾನ, ಹೆಲಿಕಾಪ್ಟರ್ನಂತಹ ಭಾರೀ ಶಸ್ತ್ರಾಸ್ತ್ರ ಪೂರೈಸುವ ಪ್ರಸ್ತಾವನೆಗೆ ಜರ್ಮನ್ ಸಂಸತ್ತಿನ ಕೆಳಮನೆ ಭರ್ಜರಿ ಬಹುಮತದಿಂದ ಗುರುವಾರ ಅನುಮೋದನೆ ನೀಡಿದೆ ಎಂದು ಮೂಲಗಳು ಹೇಳಿವೆ.
ರಶ್ಯದ ವಿರುದ್ಧ ಆರ್ಥಿಕ ದಿಗ್ಭಂಧನ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆ ದೇಶವನ್ನು ಒಬ್ಬಂಟಿಯಾಗಿಸುವ ಕ್ರಮಗಳ ಜತೆಗೇ, ರಶ್ಯದ ಆಕ್ರಮಣವನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಲು ಉಕ್ರೇನ್ಗೆ ಭಾರೀ ಶಸ್ತ್ರಾಸ್ತ್ರ ಸಹಿತ ನೆರವು ಒದಗಿಸುವ ಅಗತ್ಯವಿದೆ’ ಎಂದು ಸಂಸತ್ತಿನಲ್ಲಿ ಮಂಡಿಸಲಾದ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ಆಡಳಿತಾರೂಡ ಸಮ್ಮಿಶ್ರ ಸರಕಾರದ 3 ಮಿತ್ರಪಕ್ಷಗಳು ಮತ್ತು ವಿಪಕ್ಷ ಕನ್ಸರ್ವೇಟಿವ್ ಪಕ್ಷದ ಸದಸ್ಯರು ನಿರ್ಣಯದ ಮೇಲಿನ ಮತದಾನದಲ್ಲಿ ಭಾಗವಹಿಸಿದ್ದರು. 586 ಸದಸ್ಯರು ನಿರ್ಣಯವನ್ನು ಬೆಂಬಲಿಸಿದರೆ, 100 ಸದಸ್ಯರು ವಿರೋಧಿಸಿದರೆ ಮತ್ತು 7 ಸದಸ್ಯರು ಗೈರುಹಾಜರಾಗಿದ್ದರು ಎಂದು ಸಂಸತ್ತಿನ ಉಪಾಧ್ಯಕ್ಷ ವೊಲ್ಫ್ಗಾಂಗ್ ಕ್ಯುಬಿಕಿ ಮಾಹಿತಿ ನೀಡಿದ್ದಾರೆ.
ಕ್ರಿಮಿಯಾ ಸಹಿತ ಉಕ್ರೇನ್ ಅನ್ನು ರಶ್ಯದಿಂದ ಮುಕ್ತಗೊಳಿಸಬೇಕು ಎಂಬ ಹೇಳಿಕೆಗೆ ಬದ್ಧ: ಬ್ರಿಟನ್
ಕ್ರಿಮಿಯಾ ಸೇರಿದಂತೆ ಸಂಪೂರ್ಣ ಉಕ್ರೇನ್ ಅನ್ನು ರಶ್ಯದಿಂದ ವಿಮೋಚನೆಗೊಳಿಸಬೇಕು ಎಂಬ ವಿದೇಶಾಂಗ ಕಾರ್ಯದರ್ಶಿ ಲಿರ್ ಟ್ರುಸ್ ಅವರ ಹೇಳಿಕೆಯನ್ನು ಬ್ರಿಟನ್ ಸರಕಾರ ಸಮರ್ಥಿಸಿಕೊಂಡಿದೆ.
ಭಾಷಣವೊಂದರಲ್ಲಿ ಟ್ರುಸ್ ನೀಡಿದ್ದ ಹೇಳಿಕೆಯಲ್ಲಿ ತಪ್ಪೇನಿಲ್ಲ. ಇದು ರಶ್ಯವು 2014ರಲ್ಲಿ ಕ್ರಿಮಿಯಾ ಪರ್ಯಾಯ ದ್ವೀಪವನ್ನು ರಶ್ಯ ವಶಪಡಿಸಿಕೊಂಡಂದಿನಿಂದ ಪಾಶ್ಚಿಮಾತ್ಯ ದೇಶಗಳ ದೀರ್ಘಾವಧಿಯ ನಿಲುವಾಗಿದೆ. ಉಕ್ರೇನ್ನ ಸಾರ್ವಭೌಮ ಪ್ರದೇಶದಿಂದ ರಶ್ಯ ನಿರ್ಗಮಿಸಬೇಕು ಎಂದು ನಾವು ಈ ಹಿಂದಿನಿಂದಲೂ ಹೇಳುತ್ತಾ ಬಂದಿದ್ದೇವೆ. ಅದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಬ್ರಿಟನ್ನ ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್ರನ್ನು ಉಲ್ಲೇಖಿಸಿ ಸ್ಕೈ ನ್ಯೂಸ್ ವರದಿ ಮಾಡಿದೆ.
ಕ್ರಿಮಿಯಾವನ್ನು ಮರು ವಶಪಡಿಸಿಕೊಳ್ಳಲು ಉಕ್ರೇನ್ ಪ್ರಯತ್ನಿಸಿದರೆ ಬ್ರಿಟನ್ ನೆರವಾಗಲಿದೆಯೇ ಎಂಬ ಪ್ರಶ್ನೆಗೆ ‘ಕ್ರಿಮಿಯಾದ ಬಗ್ಗೆ ಗಮನ ಹರಿಸುವ ಮುನ್ನ ಉಕ್ರೇನ್ ಮಾಡಬೇಕಿರುವ ಇತರ ಹಲವು ಕಾರ್ಯಗಳಿವೆ’ ಎಂದು ಉತ್ತರಿಸಿದರು. ಉಕ್ರೇನ್ನ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ನಾವು ಬೆಂಬಲಿಸುತ್ತೇವೆ. ಖಂಡಿತಾ ಇದರಲ್ಲಿ ಉಕ್ರೇನ್ ಕೂಡಾ ಸೇರಿದೆ. ಆದರೆ ಇದಕ್ಕೂ ಮೊದಲು, ರಶ್ಯದ ಆಕ್ರಮಣವನ್ನ ಸಮಾಪ್ತಿಗೊಳಿಸಬೇಕಿದೆ ಎಂದು ವ್ಯಾಲೇಸ್ ಹೇಳಿದರು.ಬುಧವಾರ ಲಂಡನ್ನಲ್ಲಿ ರಾಜತಾಂತ್ರಿಕರ ಮತ್ತು ಉದ್ಯಮಿಗಳ ಸಮಾವೇಶದಲ್ಲಿ ಮಾತನಾಡಿದ್ದ ಲಿರ್ ಟ್ರುಸ್, ಉಕ್ರೇನ್ಗೆ ನೀಡುವ ಮಿಲಿಟರಿ ನೆರವನ್ನು ಬ್ರಿಟನ್ ದುಪ್ಪಟ್ಟು ಮಾಡಲಿದೆ. ಸಂಪೂರ್ಣ ಉಕ್ರೇನ್ನಿಂದ ರಶ್ಯವನ್ನು ಹೊರದಬ್ಬಲು ಇನ್ನಷ್ಟು ಹೆಚ್ಚಿನ ಮತ್ತು ತ್ವರಿತ ಕ್ರಮ ಕೈಗೊಳ್ಳಲಿದ್ದೇವೆ ಎಂದಿದ್ದರು. ಅಲ್ಲದೆ ಉಕ್ರೇನ್ಗೆ ಟ್ಯಾಂಕ್, ಯುದ್ಧವಿಮಾನಗಳನ್ನು ಒದಗಿಸಿ ನೆರವಾಗುವಂತೆ ಪಾಶ್ಚಿಮಾತ್ಯ ಮೈತ್ರಿಕೂಟಕ್ಕೆ ಕರೆ ನೀಡಿದ್ದರು.







