ವಿಶ್ವಸಂಸ್ಥೆ ಮುಖ್ಯಸ್ಥರ ಭೇಟಿ ವೇಳೆಯೇ ಕೀವ್ ಮೇಲೆ ಕ್ಷಿಪಣಿ ದಾಳಿ

ಫೈಲ್ ಫೋಟೊ
ಕೀವ್: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಟೋನಿಯೊ ಗುಟ್ರೆಸ್ ಅವರು ಉಕ್ರೇನ್ಗೆ ಭೇಟಿ ನೀಡಿದ ಸಂದರ್ಭದಲ್ಲೇ ಕೀವ್ ನಗರದ ಮೇಲೆ ರಷ್ಯಾ ಎರಡು ಕ್ಷಿಪಣಿ ದಾಳಿ ನಡೆಸಿದೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.
ಮಾಸ್ಕೊ ಪೂರ್ವ ಉಕ್ರೇನ್ನಲ್ಲಿ ದಾಳಿಯನ್ನು ತೀವ್ರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಯುದ್ಧ ಪೀಡಿತ ಉಕ್ರೇನ್ಗೆ ಮತ್ತಷ್ಟು ಮಿಲಿಟರಿ ಹಾಗೂ ಮಾನವೀಯ ನೆರವು ನೀಡುವುದಾಗಿ ಅಮೆರಿಕ ಪ್ರಕಟಿಸಿದೆ.
ಉಕ್ರೇನ್ನ ಕರಾವಳಿ ತೀರವನ್ನು ವಶಪಡಿಸಿಕೊಳ್ಳುವ ರಷ್ಯನ್ ಪಡೆಗಳು ಪ್ರಯತ್ನದಲ್ಲಿರುವ ಹಿನ್ನೆಲೆಯಲ್ಲಿ ದಕ್ಷಿಣ ಉಕ್ರೇನ್ ದಾಳಿ ಎದುರಿಸಲು ಸಜ್ಜಾಗುತ್ತಿರುವ ನಡುವೆಯೇ ಈ ದಾಳಿ ನಡೆಸಿವೆ ಎನ್ನಲಾಗಿದೆ.
ಯುದ್ಧದಿಂದಾಗಿ ಉಕ್ರೇನ್ ಭಾರಿ ನಷ್ಟ ಅನುಭವಿಸಿದ್ದು, ರಷ್ಯನ್ ಪಡೆಗಳು ಕೂಡಾ ಹಲವು ಸೈನಿಕರನ್ನು ಕಳೆದುಕೊಂಡಿವೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆನ್ಲೈನ್ನಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ಹೇಳಿದ್ದಾರೆ.
ಉಕ್ರೇನ್ ಮತ್ತು ಇತರ ಪೂರ್ವ ಯೂರೋಪ್ ದೇಶಗಳಿಗೆ ರಕ್ಷಣಾ ಸಲಕರಣೆಗಳನ್ನು "ಲೆಂಡ್-ಲೀಸ್" ಆಧಾರದಲ್ಲಿ ಪೂರೈಸುವ ಸಂಬಂಧ ಒಪ್ಪಂದ ಮಾಡಿಕೊಳ್ಳಲು ಅನುಸರಿಸಬೇಕಾದ ಅಗತ್ಯತೆಗಳನ್ನು ಸಡಿಲಗೊಳಿಸುವ ಮಸೂದೆಯನ್ನು ಅಮೆರಿಕದ ಹೌಸ್ ಆಫ್ ರೆಪ್ರಸೆಂಟಿಟೀವ್ಸ್ ಗುರುವಾರ ಆಂಗೀಕರಿಸಿದೆ.
ಇದರಿಂದಾಗಿ ಈ ಭಾಗಕ್ಕೆ ಹೆಚ್ಚಿನ ಯುದ್ಧಸಾಮಗ್ರಿಗಳನ್ನು ರವಾನಿಸಲು ಹಾದಿ ಸುಗಮವಾದಂತಾಗಿದೆ. ಈ ಮಸೂದೆಯನ್ನು ಸದನ 417-10 ಮತಗಳಿಂದ ಆಂಗೀಕರಿಸಿತು. ಈ ಮಸೂದೆಗೆ ಸೆನೆಟ್ ಏಪ್ರಿಲ್ ಆರಂಭದಲ್ಲಿ ಅವಿರೋಧ ಒಪ್ಪಿಗೆ ನೀಡಿತ್ತು. ಮಸೂದೆ ಈಗ ಅಧ್ಯಕ್ಷ ಜೋ ಬೈಡನ್ ಅವರ ಸಹಿ ಬಳಿಕ ಕಾನೂನು ಆಗಿ ಮಾರ್ಪಡಲಿದೆ.







