ಕಲ್ಲಿದ್ದಲು ಕೊರತೆ: ಮೆಟ್ರೋ, ಆಸ್ಪತ್ರೆಗಳಿಗೆ ವಿದ್ಯುತ್ ನಿಲುಗಡೆಯ ಕುರಿತು ದಿಲ್ಲಿ ಎಚ್ಚರಿಕೆ

ದಿಲ್ಲಿ ವಿದ್ಯುತ್ ಸಚಿವ ಸತ್ಯೇಂದ್ರ ಜೈನ್
ಹೊಸದಿಲ್ಲಿ: ಕಲ್ಲಿದ್ದಲು ಕೊರತೆಯ ಬಿಕ್ಕಟ್ಟಿನ ತೀವ್ರತೆಯ ಮಧ್ಯೆ, ದಿಲ್ಲಿ ಸರಕಾರ ಮೆಟ್ರೋ ರೈಲುಗಳು ಹಾಗೂ ಆಸ್ಪತ್ರೆಗಳು ಸೇರಿದಂತೆ ರಾಜಧಾನಿಯ ಪ್ರಮುಖ ಸಂಸ್ಥೆಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಲು ಸಂಭವನೀಯ ಹಿನ್ನಡೆಯಾಗುವ ಬಗ್ಗೆ ಎಚ್ಚರಿಕೆ ನೀಡಿದೆ.
ದಿಲ್ಲಿ ವಿದ್ಯುತ್ ಸಚಿವ ಸತ್ಯೇಂದ್ರ ಜೈನ್ ಅವರು ಪರಿಸ್ಥಿತಿಯನ್ನು ನಿರ್ಣಯಿಸಲು ತುರ್ತು ಸಭೆ ನಡೆಸಿದರು ಹಾಗೂ ರಾಷ್ಟ್ರ ರಾಜಧಾನಿಗೆ ವಿದ್ಯುತ್ ಸರಬರಾಜು ಮಾಡುವ ವಿದ್ಯುತ್ ಸ್ಥಾವರಗಳಿಗೆ ಸಾಕಷ್ಟು ಕಲ್ಲಿದ್ದಲು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರಕ್ಕೆ ಮನವಿ ಮಾಡಿದರು.
"ದಾದ್ರಿ-II ಹಾಗೂ ಉಂಚಹಾರ್ ವಿದ್ಯುತ್ ಸ್ಥಾವರಗಳಿಂದ ವಿದ್ಯುತ್ ಸರಬರಾಜಿನಲ್ಲಿ ಅಡಚಣೆಯಿಂದಾಗಿ ದಿಲ್ಲಿ ಮೆಟ್ರೋ ಮತ್ತು ದಿಲ್ಲಿ ಸರಕಾರಿ ಆಸ್ಪತ್ರೆಗಳು ಸೇರಿದಂತೆ ಅನೇಕ ಅಗತ್ಯ ಸಂಸ್ಥೆಗಳಿಗೆ 24 ಗಂಟೆಗಳ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆ ಉಂಟಾಗಬಹುದು" ಎಂದು ಸರಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಸ್ತುತ, ದಿಲ್ಲಿಯ ವಿದ್ಯುತ್ ಬೇಡಿಕೆಯ 25-30 ಪ್ರತಿಶತವನ್ನು ಈ ವಿದ್ಯುತ್ ಕೇಂದ್ರಗಳ ಮೂಲಕ ಪೂರೈಸಲಾಗುತ್ತಿದೆ ಹಾಗೂ ನಾವು ಕಲ್ಲಿದ್ದಲಿನ ಕೊರತೆಯನ್ನು ಎದುರಿಸುತ್ತಿದ್ದೇವೆ ಎಂದು ಜೈನ್ ಹೇಳಿದರು.
ಸರಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ರಾಜಧಾನಿಯ ಕೆಲವು ಪ್ರದೇಶಗಳಲ್ಲಿ ಜನರು ವಿದ್ಯುತ್ ಕಡಿತವನ್ನು ಎದುರಿಸದಂತೆ ನೋಡಿಕೊಳ್ಳಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಹೇಳಿದರು.







