ಜಮ್ಮುಕಾಶ್ಮೀರ: ಜಾಮಿಯಾ ಮಸ್ಜಿದ್ ನಲ್ಲಿ ರಮಝಾನ್ ನ ಕೊನೆಯ ಶುಕ್ರವಾರದ ಪ್ರಾರ್ಥನೆಗೆ ನಿರ್ಬಂಧ ಹೇರಿದ ಆಡಳಿತ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಗುರುವಾರ ಶ್ರೀನಗರದ ಐತಿಹಾಸಿಕ ಜಾಮಿಯಾ ಮಸೀದಿಯಲ್ಲಿ ಇಸ್ಲಾಮಿನಲ್ಲಿ ಪ್ರಮುಖ ಸ್ಥಾನ ಪಡೆದಿರುವ ರಮಝಾನ್ ನ ಪುಣ್ಯ ದಿನಗಳಾದ ಶಬೇ ಖದ್ರ್ ಮತ್ತು ಜುಮಾತ್-ಉಲ್-ವಿದಾ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆಗಳನ್ನು ಅನುಮತಿಸದಿರಲು ನಿರ್ಧರಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
"ಜುಮಾತ್-ಉಲ್-ವಿದಾ [ರಮಝಾನ್ ನ ಕೊನೆಯ ಶುಕ್ರವಾರದ ಪ್ರಾರ್ಥನೆಗಳು] ಮತ್ತು ಶಬ್-ಎ-ಖದ್ರ್ (ಲೈಲತುಲ್ ಖದ್ರ್) [27 ನೇ ರಾತ್ರಿ ರಾತ್ರಿಯ ಪ್ರಾರ್ಥನೆಗಳು] ದೊಡ್ಡ ಮಸೀದಿಯಲ್ಲಿ ಅನುಮತಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ," ಎಂದು ಅಲ್ತಾಫ್ ಅಹ್ಮದ್ ಭಟ್, ಜಾಮಿಯಾ ಮಸೀದಿ ಆಡಳಿತ ಕಾರ್ಯದರ್ಶಿ ಹೇಳಿದ್ದಾರೆ.
ಪವಿತ್ರ ರಮಝಾನ್ ತಿಂಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಕಣಿವೆಯಲ್ಲಿ ಸಾವಿರಾರು ಮುಸ್ಲಿಮರು ಜಾಮಿಯಾ ಮಸೀದಿಯಲ್ಲಿ ಸೇರುತ್ತಾರೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸಾಂವಿಧಾನಿಕ ಸ್ಥಾನಮಾನವನ್ನು ಕೇಂದ್ರವು ಹಿಂತೆಗೆದುಕೊಂಡಾಗ ಆಗಸ್ಟ್ 2019 ರಿಂದ ಹಲವಾರು ಸಂದರ್ಭಗಳಲ್ಲಿ ಮಸೀದಿಯನ್ನು ಮುಚ್ಚಲಾಗಿದೆ. ಕೊರೋನವೈರಸ್ ನಿರ್ಬಂಧಗಳ ಕಾರಣದಿಂದಾಗಿ ಇದು ಮುಚ್ಚಲ್ಪಟ್ಟಿದ್ದು, ಮತ್ತು ಅಂತಿಮವಾಗಿ ಮಾರ್ಚ್‌ನಲ್ಲಿ ಮತ್ತೆ ತೆರೆಯಲಾಗಿತ್ತು.
ಸ್ವತಂತ್ರ ಕಾಶ್ಮೀರಕ್ಕೆ ಆಗ್ರಹಿಸಿ ನಡೆಯುವ ಪ್ರತಿಭಟನೆಗಳನ್ನು ತಡೆಯಲು ಪ್ರಾರ್ಥನೆಗೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ ಎಂದು ಅಪರಿಚಿತ ಪೊಲೀಸ್ ಅಧಿಕಾರಿಗಳು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
"ಸಾಂಪ್ರದಾಯಿಕವಾಗಿ, ಇದು ಒಂದು ದೊಡ್ಡ ಸಭೆಯಾಗಿದೆ ಮತ್ತು ಇದು ಸುಲಭವಾಗಿ ಆಜಾದಿ ಪ್ರತಿಭಟನೆಗೆ ತಿರುಗಬಹುದು" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಅಂತಹ ದೊಡ್ಡ ಸಭೆಯನ್ನು ನಿರ್ವಹಿಸುವುದು ನಮಗೆ ಕಷ್ಟಕರವಾಗಿರುತ್ತದೆ" ಎಂದೂ ಅವರು ಹೇಳಿದ್ದಾಗಿ ವರದಿ ಉಲ್ಲೇಖಿಸಿದೆ.
ಏಪ್ರಿಲ್ 9 ರಂದು, ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಮಸೀದಿಯೊಳಗೆ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆಂದು ಆರೋಪಿಸಿ 13 ಜನರನ್ನು ಬಂಧಿಸಲಾಗಿತ್ತು.