ಉಡುಪಿ: ರೈಫಲ್‌ನಿಂದ ಅಕಸ್ಮಿಕವಾಗಿ ಸಿಡಿದ ಗುಂಡು ತಗಲಿ ಡಿಎಆರ್ ಹೆಡ್‌ಕಾನ್ ಸ್ಟೇಬಲ್ ಮೃತ್ಯು
ಉಡುಪಿ : ತನ್ನ ಸರ್ವಿಸ್ ರೈಫಲ್‌ನಿಂದ ಅಕಸ್ಮಿಕವಾಗಿ ಸಿಡಿದ ಗುಂಡು ತಾಗಿ ಉಡುಪಿ ಡಿಎಆರ್ ಘಟಕದಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತಿದ್ದ ರಾಜೇಶ್ ಕುಂದರ್ (44) ಮೃತಪಟ್ಟಿದ್ದಾರೆ.
ನಗರದ ಆದಿಉಡುಪಿ ಶಾಲೆಯಲ್ಲಿ ನಡೆಯುತ್ತಿರುವ ಎಸೆಸೆಲ್ಸಿ ಪರೀಕ್ಷಾ ಮೌಲ್ಯಮಾಪನದ ಭದ್ರತೆಗಾಗಿ ರಾಜೇಶ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದು, ನಿನ್ನೆ ರಾತ್ರಿ ಕರ್ತವ್ಯಕ್ಕೆ ಹಾಜರಾಗಿದ್ದರು ಎಂದು ತಿಳಿದು ಬಂದಿದೆ.
ಆದರೆ ಎ.28ರ ಗುರುವಾರ ರಾತ್ರಿ 9.30ರಿಂದ ಇಂದು ಬೆಳಗ್ಗೆ 10ಗಂಟೆ ನಡುವಿನ ಸಮಯದಲ್ಲಿ ಆದಿಉಡುಪಿ ಶಾಲೆಯಲ್ಲಿ ಗಾರ್ಡ್ ಕರ್ತವ್ಯದಲ್ಲಿರುವಾಗ ಅವರ ಬಳಿಯಿದ್ದ ರೈಫಲ್‌ನಿಂದ ಅಕಸ್ಮಿಕವಾಗಿ ಗುಂಡು ಹಾರಿ ರಾಜೇಶ್ ಕುಂದರ್ ಅವರ ಕುತ್ತಿಗೆ ಭಾಗಕ್ಕೆ ಸಿಡಿದು ತಲೆ ಒಡೆದು ಮೃತಪಟ್ಟಿರುವುದಾಗಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು ಒಂದು ತಿಂಗಳ ಹಿಂದೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರು ಸಿಬ್ಬಂದಿಗಳ ನಡುವೆ ಹೊಡೆದಾಟ ನಡೆದಿದ್ದು, ರಾಜೇಶ್ ಕುಂದರ್ ಸೇರಿ ಮೂವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿತ್ತು. ಗುರುವಾರ ರಾತ್ರಿಯಷ್ಟೇ ಅವರು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು.
ರಾಜೇಶ್ ಕುಂದರ್ ಅವರ ಅಸಹಜ ಸಾವು ಅಕಸ್ಮಿಕವಾಗಿ ಸಂಭವಿಸಿರುವುದೇ ಅಥವಾ ಆತ್ಮಹತ್ಯೆಯೇ ಎಂಬ ಬಗ್ಗೆ ಪೊಲೀಸ್ ತನಿಖೆಯ ಬಳಿಕ ಸ್ಪಷ್ಟಗೊಳ್ಳಲಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.