ಬಿಜೆಪಿಯೊಂದಿಗೆ ಮುನಿಸು: ಕೇಂದ್ರ ಕಾನೂನು ಸಚಿವರೊಂದಿಗಿನ ಸಭೆಗೆ ಗೈರಾಗಲು ನಿತೀಶ್ ಕುಮಾರ್ ನಿರ್ಧಾರ

ಪಾಟ್ನಾ: ಕೇಂದ್ರ ಕಾನೂನು ಸಚಿವಾಲಯ ಶನಿವಾರ ದಿಲ್ಲಿಯಲ್ಲಿ ಕರೆದಿರುವ ಮುಖ್ಯಮಂತ್ರಿಗಳ ಸಭೆಯಿಂದ ನಿತೀಶ್ ಕುಮಾರ್ ಗೈರು ಹಾಜರಾಗಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಬಿಹಾರ ಮುಖ್ಯಮಂತ್ರಿ, ತಮ್ಮ ಬದಲಿಗೆ ಕಾನೂನು ಸಚಿವರನ್ನು ಸಭೆಗೆ ತೆರಳುವಂತೆ ಕೇಳಿಕೊಂಡಿದ್ದಾರೆ.
ನಿತೀಶ್ ಕುಮಾರ್ ಅವರು ಸಭೆಗೆ ತೆರಳಲು ನಿರಾಕರಿಸಿರುವುದು ಮಿತ್ರಪಕ್ಷ ಬಿಜೆಪಿಯೊಂದಿಗೆ ಅಸಮಾಧಾನಗೊಂಡಿರುವ ಸಂಕೇತವೆಂದು ಭಾವಿಸಲಾಗುತ್ತಿದೆ.
ಕುಮಾರ್ ಅವರ ಬದಲಿಗೆ "ಬಿಜೆಪಿ ಮುಖ್ಯಮಂತ್ರಿ" ಯನ್ನು ನೇಮಿಸುವಂತೆ ಹಲವು ಬಿಜೆಪಿ ನಾಯಕರು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಶಾಸಕ ವಿನಯ್ ಬಿಹಾರಿ ಅವರಂತಹ ಕೆಲವರು, ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಅವರ ಸ್ಥಾನಕ್ಕೆ ಬಿಜೆಪಿಯ ಉಪ ಮುಖ್ಯಮಂತ್ರಿ ತಾರ್ಕಿಶೋರ್ ಪ್ರಸಾದ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಬಹಿರಂಗವಾಗಿ ಹೇಳಿದ್ದಾರೆ.
ಬುಧವಾರದ ಇಫ್ತಾರ್ ಕೂಟದಲ್ಲಿ ಮುಖ್ಯಮಂತ್ರಿಯವರು ಆರ್‌ಜೆಡಿಯ (ರಾಷ್ಟ್ರೀಯ ಜನತಾ ದಳ) ವಿಪಕ್ಷ ನಾಯಕ ತೇಜಸ್ವಿ ಯಾದವ್ ಅವರನ್ನು ಉಪ ಮುಖ್ಯಮಂತ್ರಿ ತಾರ್ಕಿಶೋರ್ ಪ್ರಸಾದ್‌ಗಿಂತ ಹೆಚ್ಚು ಆತ್ಮೀಯವಾಗಿ ಸ್ವಾಗತಿಸುತ್ತಿರುವುದು ಕಂಡುಬಂದಿತು.







