ಮೊಘಲರ ಕಾಲದ ಹೆಸರುಗಳಿರುವ 40 ಗ್ರಾಮಗಳ ಮರುನಾಮಕರಣ: ದಿಲ್ಲಿ ಬಿಜೆಪಿ ಒತ್ತಾಯ

ಹೊಸದಿಲ್ಲಿ: ಬಿಜೆಪಿಯ ದಿಲ್ಲಿ ಘಟಕದ ಮುಖ್ಯಸ್ಥ ಆದೇಶ್ ಗುಪ್ತಾ ಗುರುವಾರ ಆಮ್ ಆದ್ಮಿ ಪಕ್ಷದ ಸರಕಾರಕ್ಕೆ "ಮೊಘಲ್ ಕಾಲದ ಹೆಸರುಗಳು" ಹೊಂದಿರುವ 40 ಗ್ರಾಮಗಳ ಪಟ್ಟಿಯನ್ನು ಕಳುಹಿಸಿದ್ದಾರೆ. ಅವುಗಳಿಗೆ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಕಲಾವಿದರ ಹೆಸರಿಟ್ಟು ಮರುನಾಮಕರಣ ಮಾಡುವಂತೆ ಒತ್ತಾಯಿಸಿದ್ದಾರೆ.
ಈ ಗ್ರಾಮಗಳ ಹೆಸರುಗಳನ್ನು ಬದಲಾಯಿಸುವ ನಿರ್ಧಾರವನ್ನು ದಿಲ್ಲಿ ಸರಕಾರ ತೆಗೆದುಕೊಳ್ಳಬೇಕಾಗಿದೆ.
"ದಿಲ್ಲಿಯ ಪ್ರತಿ ಹಳ್ಳಿಯು ಸ್ವಾಭಿಮಾನದಿಂದ ತಿಳಿಯಬೇಕೇ ಹೊರತು ಗುಲಾಮಗಿರಿಯ ಯಾವುದೇ ಚಿಹ್ನೆಯಿಂದಲ್ಲ" ಎಂದು ಗುಪ್ತಾ ಗುರುವಾರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಗುಲಾಮಗಿರಿಯನ್ನು ಸಂಕೇತಿಸುವ 40 ಗ್ರಾಮಗಳಿಗೆ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಹಾನ್ ವ್ಯಕ್ತಿಗಳ ಹೆಸರನ್ನು ಇಟ್ಟು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪತ್ರ ಬರೆಯಲಾಗಿದೆ. ಕೇಜ್ರಿವಾಲ್ ಅವರು ರಾಜಕೀಯವನ್ನು ಮೀರಿ ಶೀಘ್ರದಲ್ಲೇ ತಮ್ಮ ಅನುಮೋದನೆ ನೀಡುತ್ತಾರೆ ಎಂದು ಭಾವಿಸುತ್ತೇವೆ'' ಎಂದು ಗುಪ್ತಾ ಹೇಳಿದ್ದಾರೆ.
ದಕ್ಷಿಣ ದಿಲ್ಲಿಯ ಮೊಹಮ್ಮದ್‌ಪುರ ಗ್ರಾಮವನ್ನು ಮಾಧವಪುರಂ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಸ್ಥಳೀಯ ಬಿಜೆಪಿ ಕೌನ್ಸಿಲರ್ ಭಗತ್ ಸಿಂಗ್ ಟೋಕಾಸ್ ಘೋಷಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಗ್ರಾಮವನ್ನು ಮರುನಾಮಕರಣ ಮಾಡಲು ನಡೆದ ಕಾರ್ಯಕ್ರಮದಲ್ಲಿ ಗುಪ್ತಾ ಕೂಡ ಉಪಸ್ಥಿತರಿದ್ದರು ಎಂದು 'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.
ಗ್ರಾಮಸ್ಥರ ಬೇಡಿಕೆಯ ಮೇರೆಗೆ ಮಾಧವಪುರಂ ಹೆಸರಿರುವ ಫಲಕವನ್ನು ಅಳವಡಿಸಲಾಗಿದೆ ಎಂದು ಟೋಕಾಸ್ ಪತ್ರಿಕೆಗೆ ತಿಳಿಸಿದರು.
ಗುರುವಾರ ಕೇಜ್ರಿವಾಲ್ ಅವರಿಗೆ ಬರೆದ ಪತ್ರದಲ್ಲಿ ಗುಪ್ತಾ ಅವರು 2020 ರಲ್ಲಿ ಈಶಾನ್ಯ ದಿಲ್ಲಿ ಗಲಭೆಯಲ್ಲಿ ಮಡಿದ ಅಂಕಿತ್ ಶರ್ಮಾ ಹಾಗೂ ರತನ್ ಲಾಲ್ ಅವರ ಹೆಸರನ್ನು ಎರಡು ಗ್ರಾಮಗಳಿಗೆ ಮರುನಾಮಕರಣ ಮಾಡಲು ಸಲಹೆ ನೀಡಿದ್ದಾರೆ.
ಗಾಯಕರಾದ ಲತಾ ಮಂಗೇಶ್ಕರ್ ಹಾಗೂ ಮೊಹಮ್ಮದ್ ರಫಿ, ಕ್ರಿಕೆಟಿಗ ಯಶಪಾಲ್ ಶರ್ಮಾ ಮತ್ತು ಅಥ್ಲೀಟ್ ಮಿಲ್ಕಾ ಸಿಂಗ್. 2008 ರಲ್ಲಿ ಬಾಟ್ಲಾ ಹೌಸ್ ಗುಂಡಿನ ಚಕಮಕಿಯಲ್ಲಿ ಮಡಿದ ದಿಲ್ಲಿ ಪೊಲೀಸ್ ಅಧಿಕಾರಿ ಮೋಹನ್ ಚಂದ್ ಶರ್ಮಾ, ಕಾರ್ಗಿಲ್ ಯುದ್ಧದಲ್ಲಿ ಮಡಿದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಹೆಸರನ್ನು ಮರುನಾಮಕರಣ ಮಾಡಲು ಗುಪ್ತಾ ಸಲಹೆ ನೀಡಿದರು.
दिल्ली का हर गाँव स्वाभिमान के साथ जाना जाए न कि किसी गुलामी के प्रतीक से।
— Adesh Gupta (@adeshguptabjp) April 28, 2022
आज CM @ArvindKejriwal को पत्र लिखकर गुलामी के प्रतीक 40 गांवों के नाम बदलकर स्वतंत्रता सेनानियों व महान विभूतियों के नाम पर रखे जाने की मांग की।
आशा है कि वे राजनीति से ऊपर उठकर शीघ्र स्वीकृति देंगे। pic.twitter.com/iTmO86PsMm







